ಶಿವಮೊಗ್ಗ:ಕೊರೊನಾದಿಂದ ನೀವು ಸಾಯುವುದರ ಜೊತೆಗೆ ಇತರರನ್ನು ಸಾಯಿಸಬೇಡಿ ಎಂದು ಸೋಂಕು ಹರಡಿಸುತ್ತಿರುವವರ ಕುರಿತು ಸಚಿವ ಈಶ್ಚರಪ್ಪ ಕಠೋರವಾಗಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಡಿ.ಎ.ಆರ್ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮಲ್ಲಿ ಪರೀಕ್ಷೆಗಳು ಸಹ ಹೆಚ್ಚಾಗಿ ನಡೆಸುತ್ತಿರುವುದರಿಂದ ಪಾಸಿಟಿವ್ ಸಂಖ್ಯೆಯು ಹೆಚ್ಚಾಗಿ ಬರುತ್ತಿವೆ ಎಂದರು.
ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು, ಸ್ಯಾನಿಟೈಸರ್ ಬಳಸಬೇಕು. ಯಾರು ಮಾಸ್ಕ್ ಹಾಕುವುದಿಲ್ಲವೋ ಅವರಿಗೆ ಮಾಸ್ಕ್ ಹಾಕಿ ಎಂದು ಹೇಳಬೇಕು. ಜನ ಹೆಚ್ಚಾಗಿ ಗುಂಪು ಸೇರಬೇಡಿ, ಗುಂಪು ಸೇರಿದಾಗ ಮಾಸ್ಕ್ ಧರಿಸಬೇಕು. ಕೊರೊನಾ ಬಂದವರು ಸಾಯುತ್ತಾರೆ. ಆದರೆ ನಿಮಗೆ ಬೇರೆಯವರನ್ನು ಸಾಯಿಸುವ ಹಕ್ಕಿಲ್ಲ ಎಂದು ಕಿಡಿ ಕಾರಿದರು.
ಕೊರೊನಾದಿಂದ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ. ಕೊರೊನಾ ಹರಡದಂತೆ ತಡೆಯಲು ಮಾಸ್ಕ್ ಧರಿಸಬೇಕು, ಇಲ್ಲವಾದಲ್ಲಿ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದರು. ದಂಡ ಹಾಕಿದ್ರು ಸಹ ಜನ ಎಚ್ಚೆತ್ತುಕೊಳ್ಳದೆ ಹಾಗೆಯೇ ತಿರುಗಾಡುತ್ತಿದ್ದಾರೆ. ಇದು ಅಪಾಯಕಾರಿ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳದೆ ಹೋದರೆ ಯಾವ ಸರ್ಕಾರ ಏನೂ ಮಾಡಿದರೂ ಪ್ರಯೋಜನವಿಲ್ಲ ಎಂದರು.
ಈ ವೇಳೆ ಡಿಸಿ ಶಿವಕುಮಾರ್, ಎಸ್ಪಿ ಶಾಂತರಾಜು, ಜಿ.ಪಂ. ಸಿ.ಇ.ಓ ವೈಶಾಲಿ, ಮೇಯರ್ ಸುವರ್ಣ ಶಂಕರ್ ಹಾಜರಿದ್ದರು.