ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಶಾಲೆಗಳಿಗೂ ಡೆಸ್ಕ್ ಪೂರೈಕೆ: ಮಧು ಬಂಗಾರಪ್ಪ ಶಿವಮೊಗ್ಗ: ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಶಾಲೆಗಳಿಗೂ ಡೆಸ್ಕ್ ಒದಗಿಸಲಾಗುವುದು. ಯಾವುದೇ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳಬೇಕಿಲ್ಲ. ಇದು ಸರ್ಕಾರದ ಆದೇಶವಾಗಲಿದೆ ಎಂದು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಂದು ಶಿವಮೊಗ್ಗದ ಪದವೀಧರ ಸಹಕಾರ ಸಂಘದ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ರಾಜ್ಯದ ಎಲ್ಲಾ ಸರ್ಕಾರಿ, ಅನುದಾನ, ಅನುದಾನರಹಿತ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿ ತನಕ ಯಾವ ಮಕ್ಕಳು ಕೂಡ ನೆಲದ ಮೇಲೆ ಕುಳಿತುಕೊಂಡು ಪಾಠ ಓದುವಂತಿಲ್ಲ. ಇದು ಸರ್ಕಾರಿ ಆದೇಶವಾಗಲಿದೆ. ಮುಂದಿನ ವರ್ಷ ಅಥವಾ ಅದರ ಮುಂದಿನ ವರ್ಷದ ಒಳಗೆ ರಾಜ್ಯದ ಎಲ್ಲಾ ಶಾಲೆಗಳಿಗೂ ಡೆಸ್ಕ್ ಒದಗಿಸಲಾಗುವುದು" ಎಂದು ತಿಳಿಸಿದರು.
"ನಾನು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ್ದೆ. ಈ ವೇಳೆ ಗ್ರಾಮಗಳ ಭೇಟಿ ನೀಡಿದಾಗ ಶಾಲೆಗಳ ಪರಿಸ್ಥಿತಿಯನ್ನು ನೋಡಿದ್ದೇನೆ. ಇದರಿಂದ ಎಲ್ಲರಲ್ಲೂ ಸಮಾನತೆ ತರಬೇಕೆಂದು ಡೆಸ್ಕ್ಗಳನ್ನು ವಿತರಿಸಲಾಗುತ್ತಿದೆ ಎಂದರು.
ಜ.12ರಂದು ಯುವ ನಿಧಿಗೆ ಚಾಲನೆ: "ನಮ್ಮ ಪಕ್ಷದ ಕೊನೆಯ ಗ್ಯಾರಂಟಿಯಾದ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಕಾರ್ಯಕ್ರಮವನ್ನು ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಡಿಸೆಂಬರ್ 26ರಿಂದ ಯುವ ನಿಧಿ ಯೋಜನೆ ನೋಂದಣಿ ನಡೆಯಲಿದೆ. ಜನವರಿ12 ರಂದು ಸ್ವಾಮಿ ವಿವೇಕಾನಂದರವರ ಜಯಂತಿಯಂದು ಯುವ ನಿಧಿ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ" ಎಂದು ಮಾಹಿತಿ ನೀಡಿದರು.
"ಯುವ ನಿಧಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಮೊನ್ನೆ ಸಿಎಂ ಒಪ್ಪಿಕೊಂಡರು. ಡಿಪ್ಲೋಮಾ ಮುಗಿಸಿದವರಿಗೆ 1,500 ರೂ. ಹಾಗೂ ಪದವಿ ಪಡೆದವರಿಗೆ 3000 ರೂ.ಗಳನ್ನು ನೀಡಲಾಗುವುದು. ನಾನು ಪ್ರಣಾಳಿಕ ಸಮಿತಿ ಉಪಾಧ್ಯಕ್ಷನಾಗಿದ್ದು, ಕೊನೆಯ ಗ್ಯಾರಂಟಿ ಯೋಜನೆಯು ನಾನು ಉಸ್ತುವಾರಿಯಾಗಿರುವ ಜಿಲ್ಲೆಯಲ್ಲಿ ನಡೆಸುತ್ತಿರುವುದು ತುಂಬಾ ಸಂತೋಷ ತಂದಿದೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಶರಣ ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರುಗಳು ಭಾಗವಹಿಸಲಿದ್ದಾರೆ" ಎಂದರು.
"ಶಾಲಾ ಮಕ್ಕಳಿಂದ ಯಾವುದೇ ಕೆಲಸವನ್ನು ಮಾಡಿಸುವಂತಿಲ್ಲ. ಇದು ಅಪರಾಧ. ಈ ರೀತಿ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸುವುದು ಕಂಡುಬಂದರೆ, ಅವರ ವಿರುದ್ದ ದೂರು ದಾಖಲಿಸಲು ಸೂಚಿಸಿದ್ದೇನೆ. ಶಿಕ್ಷಕರ ನೇಮಕವನ್ನು ಹಿಂದಿನ ಎಲ್ಲಾ ಸರ್ಕಾರಗಳು ಮಾಡಿಕೊಂಡು ಬಂದಿವೆ. ನಾವು ಮಾಡಿದ್ದೇವೆ. ಮಕ್ಕಳು ಶಾಲೆಯ ಶೌಚಾಲಯ ತೊಳೆಯುವ ಪ್ರಕರಣ ನಡೆದಿರುವುದು ತಪ್ಪು. ಇದು ಎಲ್ಲಾ ನಡೆಯುವುದಿಲ್ಲ. ಸರ್ಕಾರ ಎಲ್ಲವನ್ನು ನೀಡಬೇಕಿದೆ. ಈಗ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗಿದೆ. 43 ಸಾವಿರ ಶಿಕ್ಷಕರ ನೇಮಕವಾಗಬೇಕು. ಈಗ 15 ಸಾವಿರ ಶಿಕ್ಷಕರನ್ನು ನೀಡಿದ್ರೆ ನಾವು ಸಂಭಾಳಿಸಬಹುದು. ಅತಿಥಿ ಶಿಕ್ಷಕರಂತೆ, ಸ್ವಚ್ಚ ಮಾಡುವವರನ್ನು ಸಹ ಅತಿಥಿಯಾಗಿ ಪಡೆಯಬಹುದು. ಆದರೆ ಅವರಿಗೆ ನೀಡಲು ಹಣ ಬೇಕು. ಶಾಲೆಗಳ ಸ್ವಚ್ಛತೆಗೆ ಹಿಂದಿನ ಸರ್ಕಾರದ ಡಬಲ್ ಹಣ ನೀಡುತ್ತಿದ್ದೇನೆ" ಎಂದು ತಿಳಿಸಿದರು.
"ಹಿಜಾಬ್ ಕುರಿತು ಮುಖ್ಯಮಂತ್ರಿಗಳ ನಿರ್ಧಾರವೆ ಅಂತಿಮ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು" ಎಂದರು.
ಇದನ್ನೂ ಓದಿ:ಕೋರ್ ಕಮಿಟಿ ಜೊತೆ ಚರ್ಚಿಸಿ ಪದಾಧಿಕಾರಿಗಳ ನೇಮಕ ಮಾಡಬೇಕಿತ್ತು: ಸದಾನಂದಗೌಡ ಅಸಮಾಧಾನ