ಶಿವಮೊಗ್ಗ: ಜಗದ ಎಲ್ಲಾ ರೋಗ ರುಜಿನಗಳಿಗೆ ಶಿಕ್ಷಣವೇ ಮದ್ದು ಎಂದು ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಡಿ ಚನ್ನಣ್ಣನವರ್ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಚಿರಾಗ್ ಇನ್ಫೋಟೆಕ್, ಎಂ.ಬಿ.ಎ ಮತ್ತು ಎಂ.ಸಿ.ಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕಿಯೋನಿಕ್ಸ್ ಸಂಸ್ಥೆಯ ಉನ್ನತ ತರಬೇತಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಯ ಮತ್ತು ಅವಕಾಶ ಬದುಕಿನಲ್ಲಿ ಅಮೂಲ್ಯವಾದದ್ದು. ಓದುವ ಸಮಯ, ಸಾಧಿಸುವ ಅವಕಾಶ ಸದಾ ಬದುಕಿನಲ್ಲಿ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಜೀವನದಲ್ಲಿ ಏನೇ ಸಾಧನೆ ಸಾಧ್ಯವಾಗುತ್ತದೆ ಎಂದಾದರೇ ಅದು ನಮ್ಮ ಓದಿನ ಹಪಾಹಪಿಯಿಂದ ಮಾತ್ರ. ಹಿಂದೆ ಯಾಗಗಳ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಲಾಗುತ್ತಿತ್ತು. ಇಂದು ವಿದ್ಯೆಯ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಯಾಗ ನಡೆಯುತ್ತಿದೆ ಎಂದರು.
ನಮ್ಮೂರಿನ ಹಳ್ಳಿಯ ಶಾಲೆಯಿಂದ ಪದವಿಗೆ ತಲುಪಲು ಸಾಧ್ಯವಾಗಿದ್ದು ಕೆಲವೇ ಕೆಲವರಿಗೆ ಮಾತ್ರ. ವಿದ್ಯಾರ್ಥಿಯಾಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಾಧಕನಾಗ ಬಯಸುವವರಿಗೆ ಜಗತ್ತನ್ನು ಸಂತೋಷ ಪಡಿಸುವ ತೊಂದರೆ ಬೇಡ, ನಿಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡಿ. ಅದಕ್ಕಾಗಿ ವಿವೇಕ ಚೂಡಾಮಣಿಯಂತಹ ಪುಸ್ತಕಗಳ ಅಧ್ಯಯನ ನಡೆಸಿ. ನಮ್ಮ ಚಂದನವನ ಸದಾಚಾರಗಳ ಚಂದನವನವಾಗಿರಬೇಕು. ಆಂತರಿಕ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಉತ್ತಮ ವಿದ್ಯಾರ್ಥಿಯ ಪ್ರಮುಖ ಗುಣಲಕ್ಷಣಗಳೆಂದರೇ ಗ್ರಹಿಕೆ, ಕೇಳುವಿಕೆ ಮತ್ತು ಬರೆಯುವಿಕೆ. ಈ ಗುಣಲಕ್ಷಣಗಳೊಂದಿಗೆ ನಿರಂತರ ಕಲಿಕೆ ನಿಮ್ಮದಾಗಲಿ ಎಂದರು.
ಈ ಜಗತ್ತಿನಲ್ಲಿ ಪೊಲೀಸರಿಗೆ ಇರುವಷ್ಟು ಅವಕಾಶ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಈ ಜಗತ್ತಿಗೆ ಶಾಂತಿಯ ಅವಶ್ಯಕತೆಯಿದೆ. ಅಂತಹ ಶಾಂತಿ ಮತ್ತು ಸುಭದ್ರತೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.