ಶಿವಮೊಗ್ಗ: ಕಬಾಬ್ ತಯಾರಿಸುವ ಗಾಡಿಯಲ್ಲಿದ್ದ ಬಿಸಿ ಎಣ್ಣೆಯನ್ನು ಯುವಕನ ಮೇಲೆರಚಿ ಕುಡುಕನೋರ್ವ ಕಿರಿಕ್ ಮಾಡಿರುವ ಘಟನೆ ಗುರುವಾರ ಸಂಜೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಬಿ.ಹೆಚ್.ರಸ್ತೆಯ ಹಳೆ ವಿನಾಯಕ ಚಿತ್ರಮಂದಿರದ ಮುಂಭಾಗದ ಫುಟ್ಪಾತ್ನಲ್ಲಿ ದುರ್ಗಾಪರಮೇಶ್ವರಿ ಫಾಸ್ಟ್ ಫುಡ್ ಹೆಸರಿನ ಕಬಾಬ್ ಗಾಡಿ ಇದೆ. ಇಲ್ಲಿಗೆ ಬಂದ ಕುಡುಕ ಸುಮ್ಮನೆ ಕಿರಿಕ್ ಪ್ರಾರಂಭಿಸಿದ್ದಾನೆ. ಈ ವೇಳೆ ಗ್ಯಾಸ್ ಸ್ಟವ್ ಮೇಲಿದ್ದ ಬಿಸಿ ಎಣ್ಣೆಯನ್ನು ಏಕಾಏಕಿ ಎತ್ತಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಎರಚಿದ್ದಾನೆ.
ಧನುಷ್ ಎಂಬ ಕಾಲೇಜು ಯುವಕನ ಮೇಲೆ ಬಿಸಿ ಎಣ್ಣೆ ಬಿದ್ದಿದೆ. ಒಮ್ಮೆಲೆ ಎಣ್ಣೆ ಬಿದ್ದ ಕಾರಣ ಆತ ಕೂಗಿಕೊಂಡಿದ್ದಾನೆ. ಅಕ್ಕಪಕ್ಕದ ಅಂಗಡಿಯವರು ಬಂದು ಯುವಕನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಆದರೆ, ಎಣ್ಣೆ ಎರಚಿದ ಕುಡುಕ ತನ್ನ ಕಿರಿಕ್ ಮುಂದುವರೆಸಿದ್ದು, ಸಾರ್ವಜನಿಕರು ಗದರಿಸುತ್ತಿದ್ದಂತೆ ತನ್ನ ಬಟ್ಟೆಯನ್ನು ತಾನೇ ಕಿತ್ತುಕೊಂಡು ಫುಟ್ಪಾತ್ನಲ್ಲಿ ಬಿದ್ದು ಒದ್ದಾಡಿದ್ದಾನೆ.
ಬಳಿಕ, ಕುಡುಕನನ್ನು ಆಸ್ಪತ್ರೆಗೆ ಕಳುಹಿಸಲು ಆಂಬ್ಯುಲೆನ್ಸ್ ಕರೆಸಿದಾಗ ಆತ ಹೋಗದೆ ಮತ್ತೆ ಕಿರಿಕ್ ಮಾಡಿದ್ದು, ಪೊಲೀಸರು ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಿಸಿ ಎಣ್ಣೆ ತಗುಲಿ ಯುವಕನ ಕುತ್ತಿಗೆಯ ಹಿಂಭಾಗಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಡುಕನನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.