ಶಿವಮೊಗ್ಗ :ಸಮಾಜದಲ್ಲಿ ದಿನೇ ದಿನೆ ಕ್ರೈಂ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಾಕಷ್ಟು ಶ್ರಮಿಸುತ್ತಿದ್ದರೂ ಕ್ರೈಂ ತಡೆಯುವಲ್ಲಿ ವಿಫಲವಾಗುತ್ತಿದ್ದಾರೆ ಎನ್ನಬಹುದು. ಕ್ರೈಂ ನಡೆದ ನಂತರ ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಶ್ರಮ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜಘಾತುಕ ಶಕ್ತಿಗಳ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆಯು ತಾಂತ್ರಿಕವಾಗಿ ಮುನ್ನುಡಿ ಇಡುತ್ತಿದೆ. ಇದರ ಭಾಗವಾಗಿ ಇಲಾಖೆಯು ಡ್ರೋನ್ ಬಳಸಲು ಮುಂದಾಗಿದ್ದು, ಪಡ್ಡೆಗಳು, ಕಿಡಿಗೇಡಿಗಳ ಮೇಲೆ ಕಣ್ಣಿಡಲು ಇದು ಸಹಾಯಕವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗ ಪೊಲೀಸ್ ಇಲಾಖೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಒಂದಿಲ್ಲೊಂದು ರೀತಿಯಲ್ಲಿ ಕಾರ್ಯಾಚರಣೆ ಮಾಡುತ್ತಾ ಬಂದಿದೆ. ಸಮಾಜದಲ್ಲಿ ಬೇಕಾಬಿಟ್ಟಿ ಕೆಲಸ ಇಲ್ಲದೇ ಹರಟೆ ಹೊಡೆಯುತ್ತ ಸಾರ್ವಜನಿಕರಿಗೆ ತೊಂದರೆ ನೀಡುತ್ತಾ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಪಡ್ಡೆಗಳು, ಕಿಡಿಗೇಡಿಗಳ ಮೇಲೆ ಕಣ್ಣಿಡಲು ಇದೀಗ ಡ್ರೋನ್ ಕ್ಯಾಮೆರಾ ಉಪಯೋಗಿಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಾಗರ ಉಪ ವಿಭಾಗ ಪೊಲೀಸ ಅಧೀಕ್ಷಕರಾದ ಗೋಪಾಲಕೃಷ್ಣ ನಾಯ್ಕ್ ಅವರು, ಇತ್ತೀಚಿನ ದಿನಗಳಲ್ಲಿ ಸಾಗರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾದರೂ ಕುಳಿತುಕೊಳ್ಳುವುದು. ಗಾಂಜಾ ಸೇವನೆ ಮಾಡುವುದು ಇಂತಹ ಘಟನೆಗಳನ್ನು ತಪ್ಪಿಸಲು ಹಾಗೂ ಬೇರೆ ಬೇರೆ ಅಪರಾಧಗಳನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಎಸ್ಪಿ ಜಿ.ಕೆ ಮಿಥುನ್ಕುಮಾರ್ ಅವರು ಡ್ರೋನ್ ಕ್ಯಾಮೆರಾ ಒದಗಿಸಿದ್ದಾರೆ. ಇದೀಗ ಸಂಜೆ ವೇಳೆಯಲ್ಲಿ ನಗರದ ಪ್ರಮುಖ ಏರಿಯಾಗಳಲ್ಲಿ ಹಾಗೂ ಪಾಳುಬಿದ್ದ ಕಟ್ಟಡಗಳ ಸಮೀಪ ಡ್ರೋನ್ ಕೈಮರ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದೇವೆ.