ಶಿವಮೊಗ್ಗ:ಜಿಲ್ಲೆಯಲ್ಲಿ ಕೆಎಫ್‍ಡಿ (ಮಂಗನ ಕಾಯಿಲೆ) ನಿಯಂತ್ರಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಎಫ್‍ಡಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಗುರುತಿಸಲಾಗಿರುವ ಹಾಟ್‍ಸ್ಪಾಟ್‍ಗಳಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು.
ಈ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಮಂಗ ಸತ್ತಿರುವುದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು. ಸತ್ತ ಪ್ರತಿಯೊಂದು ಮಂಗದಿಂದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಕ್ಯಾಸನೂರು ಕಾಡಿನ ಖಾಯಿಲೆಯ ನಿಯಂತ್ರಣ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಮತ್ತಷ್ಟು ಚುರುಕುಗೊಳಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿವೆ. ಲಸಿಕೆಯ ಗುಣಮಟ್ಟ ಹಾಗೂ ಪರಿಣಾಮಕಾರಿ ನಿಯಂತ್ರಣ ಚಟುವಟಿಕೆಗಳ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ.
ಎನ್‍ಐವಿ ಪುಣೆಯವರು ಲಸಿಕಾ ಗುಣಮಟ್ಟ ಉತ್ತಮವಾಗಿಲ್ಲದಿರುವ ಬಗ್ಗೆ ಯಾವುದೇ ವರದಿ ನೀಡಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ತಿಳಿಸಿದರು.
ಸಂಖ್ಯಾ ವಿವರ : ಜಿಲ್ಲೆಯಲ್ಲಿ 2019ರಲ್ಲಿ 4956 ಮಾದರಿ ಪರೀಕ್ಷೆ ನಡೆಸಲಾಗಿದೆ. 445 ಕೆಎಫ್‍ಡಿ ಪ್ರಕರಣಗಳು ದೃಢಪಟ್ಟು 15 ಮಂದಿ ಮೃತಪಟ್ಟಿದ್ದರು. 1,15,957 ಮಂದಿಗೆ ಲಸಿಕೆ ಹಾಗೂ 37869 ಡಿಪಿಎಂ ತೈಲ ವಿತರಣೆ ಮಾಡಲಾಗಿತ್ತು. 2020ರಲ್ಲಿ 6975 ಮಾದರಿ ಪರೀಕ್ಷೆ ನಡೆಸಲಾಗಿದ್ದು, 287 ಕೆಎಫ್‍ಡಿ ಪ್ರಕರಣಗಳು ದೃಢಪಟ್ಟು 5 ಮಂದಿ ಮೃತಪಟ್ಟಿದ್ದರು.