ಶಿವಮೊಗ್ಗ:ಗಂಡನ ಮನೆಯವರ ಕಿರುಕುಳದಿಂದ ಗೃಹಿಣಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ನ್ಯೂ ಮಂಡ್ಲಿಯ ಎರಡನೇ ಕ್ರಾಸ್ ನಿವಾಸಿ ಸವಿತ (31) ಆತ್ಮಹತ್ಯೆಗೆ ಶರಣಾದ ಗೃಹಿಣಿ.
ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಸವಿತ ಜಾವಳ್ಳಿಯವಳಾಗಿದ್ದು, ಈಕೆ ನ್ಯೂ ಮಂಡ್ಲಿ ನಿವಾಸಿಯಾದ ಆಟೋ ಚಾಲಕ ಹೇಮಂತ್ ಎಂಬುವರನ್ನು 10 ವರ್ಷದ ಹಿಂದೆ ಮದುವೆಯಾಗಿದ್ಧಳು. ಮದುವೆಯಾದಾಗಿನಿಂದ ಹೇಮಂತ್, ಆತನ ತಾಯಿ ಹಾಗೂ ಸಹೋದರಿಯರು ಕಿರುಕುಳ ನೀಡುತ್ತಿದ್ದರು. ಪ್ರತಿದಿನ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇವರಿಬ್ಬರಿಗೂ 7 ವರ್ಷದ ಮಗನಿದ್ದಾನೆ. ಕಳೆದ ಆರು ತಿಂಗಳ ಹಿಂದೆ ಹೇಮಂತ್ ಸವಿತ ಮೈ ಮೇಲೆ ಬಿಸಿ ನೀರು ಎರಚಿದ್ದರು. ಇದರಿಂದ ಸವಿತರವರ ಎದೆ, ಕುತ್ತಿಗೆ ಭಾಗ ಸುಟ್ಟಿತ್ತು. ಈ ವೇಳೆ ಸವಿತ ತವರು ಮನೆಯವರು ಬಂದು ಚಿಕಿತ್ಸೆ ಕೊಡಿಸಿದ್ದರು. ತವರು ಮನೆಯವರು ಬಂದು ಕೇಳಿದಾಗ ಕಷ್ಟವನ್ನು ಕೇಳಿದ್ರೆ, ಸವಿತ ಯಾವುದೇ ವಿಚಾರವನ್ನು ಹೇಳುತ್ತಿರಲಿಲ್ಲ. ಆದರೆ ನಿನ್ನೆ ಮಧ್ಯಾಹ್ನ ಸವಿತ ತನ್ನ ಅಕ್ಕನ ಜೊತೆ ಪೋನ್ನಲ್ಲಿ ಗಂಡ ಹಾಗೂ ತವರು ಮನೆಯವರು ನೀಡಿದ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಸಂಜೆಯಾಗುವಷ್ಟರಲ್ಲಿ ಸವಿತ ಗಂಡ ಹೇಮಂತ್ ಸವಿತ ಅಕ್ಕನಿಗೆ ಪೋನ್ ಮಾಡಿ, ನಿಮ್ಮ ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಬಂದು ಶವವನ್ನು ತೆಗೆದುಕೊಂಡು ಹೋಗಬೇಕೆಂದು ತಿಳಿಸಿದ್ದಾನೆ.
ಸವಿತ ಕುಟುಂಬಸ್ಥರು ಬರುವಷ್ಟರಲ್ಲಿ ಹೇಮಂತ್ ಹೋಗಿ ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡಿದ್ದಾನೆ. ಸದ್ಯ ಶವ ಪರೀಕ್ಷೆ ಮುಗಿಸಿ, ಶವವನ್ನು ಗಂಡನ ಮನೆ ಬಳಿ ತರಲಾಗಿದೆ. ಆದರೆ ಗಂಡನ ಮನೆಯವರು ಹೊರಗೆ ಬಾರದೆ ಮನೆಯ ಒಳಗೆ ಕುಳಿತುಕೊಂಡಿದ್ದಾರೆ. ಸದ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಮಂತ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸವಿತ ಕುಟುಂಬಸ್ಥರು ಆಗ್ರಹಿಸಿದ್ದಾರೆ.