ಶಿವಮೊಗ್ಗ:ಡಬಲ್ ಇಂಜಿನ್ ಸರ್ಕಾರಗಳು ದೇಶ ಹಾಗೂ ರಾಜ್ಯಗಳಲ್ಲಿ ನಡೆಸಿರುವ ಅಭಿವೃದ್ಧಿಯನ್ನು ಮತದಾರರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.
ಇಂದು ಕಾರ್ಯಕರ್ತರೊಂದಿಗೆ ಆನ್ಲೈನ್ ಮೂಲಕ ನಡೆಸಿದ ಸಂವಾದದಲ್ಲಿ, ಶಿವಮೊಗ್ಗ ಸವಾಲಿನ ಕ್ಷೇತ್ರವಾಗಿದೆ. ಪ್ರಸ್ತುತ ಗೊಂದಲದ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಬೂತ್ ಮಟ್ಷದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ಜನರಿಗೆ ಹೇಗೆ ತಲುಪಬೇಕು ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಕೇಳಿದ್ದರು. ಇದಕ್ಕೆ ಉತ್ತರಿಸಿದ ಮೋದಿ, ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪಬೇಕಿದೆ. ಕೇವಲ ಮನೆ ಹೊರಗೆ ನಿಂತು ಪಾಂಪ್ಲೆಟ್ ಕೊಟ್ಟು ಬರಬೇಡಿ. ನೀವು ಮತದಾರರಿಗೆ ಏನು ಹೇಳಲು ಹೊರಟ್ಟಿದ್ದೀರಾ, ಅದು ನಿಮ್ಮ ಮೊಬೈಲ್, ಡೈರಿಯಲ್ಲಿ ಬರೆದಿಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು.
ಮತದಾರರ ಮನೆಗೆ ಹೋದಾಗ ದೊಡ್ಡವರಿಗೆ ನಮಸ್ಕಾರ ಮಾಡಬೇಕು. ಸಣ್ಣ ಮಕ್ಕಳಿಗೆ ಪ್ರೀತಿ ತೋರಿಸಬೇಕು. ಬಿಜೆಪಿ ಸರ್ಕಾರದ ಯೋಜನೆಯನ್ನು, ಸಾಧನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಡಬಲ್ ಇಂಜಿನ್ ಸರ್ಕಾರ ಯಾವ ರೀತಿ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಮಾಡುತ್ತಿದೆ ಎನ್ನುವುದರ ಬಗ್ಗೆ ಜನರಿಗೆ ತಿಳಿಸಿಕೊಡಿ. ನಮ್ಮ ಪಕ್ಷ ದೇಶದ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿರುವುದರ ಬಗ್ಗೆ ಮತದಾರರಿಗೆ ಮನನ ಮಾಡಿಕೊಡಿ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿರುವುದರ ಬಗ್ಗೆ ಮತದಾರರಿಗೆ ಮಾಹಿತಿ ತಲುಪುವಂತೆ ಮಾಡಿ ಎಂದು ಮೋದಿ ಸಲಹೆ ನೀಡಿದ್ರು.
ಡಬಲ್ ಇಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂಬುದು ತಿಳಿಸುವ ಅಗತ್ಯವಿದೆ. ಕೇವಲ ರಾಜಕೀಯ ಮಾಡದೇ, ಅಭಿವೃದ್ಧಿ ಮಾಡುವುದು ನಮ್ಮ ಪಣವಾಗಿದೆ. ಮೆಡಿಕಲ್ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆ ಮಾಡಲಾಗಿದೆ. ಭ್ರಷ್ಟಾಚಾರದ ವಿರುದ್ಧ ಡಬಲ್ ಇಂಜಿನ್ ಸರ್ಕಾರ ಪ್ರಹಾರ ಮಾಡಿದೆ. ಕಪ್ಪು ಹಣ ವರ್ಗಾವಣೆ ಬಗ್ಗೆ ನಿಗಾ ಇಟ್ಟಿದೆ. ಕೆಲವರ ಜೇಬು ಸೇರುತ್ತಿದ್ದ ಹಣ ಈಗ ಸರ್ಕಾರದ ಖಜಾನೆ ಸೇರುತ್ತಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಡಬಲ್ ಇಂಜಿನ್ ಸರ್ಕಾರ ಸಮರ ಸಾರಿದೆ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತವಾಗಿಸಲು ನಮ್ಮ ಸರ್ಕಾರ ಮುಂದಾಗಿದೆ ಎಂದರು.