ಕರ್ನಾಟಕ

karnataka

ಕೊರೊನಾ ಹಾವಳಿ: ಇತರೆ ಸಾಂಕ್ರಾಮಿಕ ರೋಗಗಳನ್ನು ಮರೆಯಿತೆ ಶಿವಮೊಗ್ಗ ಜಿಲ್ಲಾಡಳಿತ?

By

Published : Jul 19, 2020, 1:59 PM IST

Updated : Jul 19, 2020, 3:24 PM IST

ಕೊರೊನಾ ಸೋಂಕಿತರ ಪತ್ತೆ, ಸೋಂಕಿತರನ್ನು‌ ಆಸ್ಪತ್ರೆಗೆ‌ ದಾಖಲಿಸುವುದು, ಕಂಟೈನ್ಮೆಂಟ್ ಝೋನ್ ಮಾಡುವುದು ಹಾಗೂ ಆಗಾಗ್ಗೆ ಲಾಕ್​ಡೌನ್ ಮಾಡುವುದನ್ನು ಬಿಟ್ಟರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ‌ ಕ್ರಮಗಳನ್ನು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸರ್ಕಾರ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕೊರೊನಾ ಹಾವಳಿ
ಕೊರೊನಾ ಹಾವಳಿ

ಶಿವಮೊಗ್ಗ: ಕೊರೊನಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಇದರ ಬಗ್ಗೆ ಹೆಚ್ಚು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆದರೆ ಈ ನಡುವೆ ಸಾಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ‌ ಕ್ರಮ ತೆಗೆದುಕೊಳ್ಳುವ ಕುರಿತು ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು ಸಂಪೂರ್ಣ ವಿಫಲವಾಗಿವೆ ಎಂಬ ಆರೋಪ ಕೇಳಿ ಬಂದಿವೆ.

ಕೊರೊನಾ ಸೋಂಕಿತರ ಪತ್ತೆ, ಸೋಂಕಿತರನ್ನು‌ ಆಸ್ಪತ್ರೆಗೆ‌ ದಾಖಲಿಸುವುದು, ಕಂಟೈನ್ಮೆಂಟ್ ಝೋನ್ ಮಾಡುವುದು ಹಾಗೂ ಆಗಾಗ್ಗೆ ಲಾಕ್ ಡೌನ್ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಕ್ರಮವನ್ನು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಕೊರೊನಾ ಸಮಸ್ಯೆ ನಡುವೆ ಸಾಕ್ರಾಮಿಕ ರೋಗಗಳಾದ ಡೆಂಗ್ಯೊ, ಮಲೇರಿಯಾ, ಚಿಕನ್ ಗುನ್ಯಾ, H1N1 ಹಾಗೂ‌ ಮಲೆನಾಡಿನ ಮಂಗನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ತೋರಿದೆ ಎನ್ನುತ್ತಾರೆ ಸ್ಥಳೀಯರು.

ಮಲೆನಾಡಿನಲ್ಲಿ ಮಳೆಗಾಲ‌ ಪ್ರಾರಂಭವಾದರೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಈ ವೇಳೆಗಾಗಲೇ ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳು‌ ಕೊರೊನಾದ ಹಿಂದೆ ಬಿದ್ದಿದ್ದಾರೆ. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ‌ಮಲೇರಿಯಾ, ಚಿಕನ್ ಗುನ್ಯಾ ಸೊಳ್ಳೆಗಳು‌ ಕಚ್ಚಿದಾಗ ಬರುತ್ತವೆ. ಮಳೆಗಾಲ ಪ್ರಾರಂಭವಾಗಿ ಅಲ್ಲಲ್ಲಿ ನೀರು ನಿಂತರೆ ಸೊಳ್ಳೆಗಳಿಗೆ ಸ್ವರ್ಗ ಸಿಕ್ಕಂತೆ. ಸೊಳ್ಳೆಗಳು ತಿಳಿ‌ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಹೀಗೆ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಜೂನ್- ಜುಲೈನಿಂದ ಪ್ರಾರಂಭವಾಗುವ ಸಾಕ್ರಾಮಿಕ ರೋಗಳು ನವೆಂಬರ್ ವರೆಗೂ ಇರುತ್ತವೆ.

ಸಾಂಕ್ರಾಮಿಕ ತಡೆಯಬೇಕಾದ ಆಡಳಿತಗಳಿಂದ ನಿರ್ಲಕ್ಷ್ಯ: ಕೊರೊನಾ ಹಿಂದೆ ಬಿದ್ದಿರುವ ಆಡಳಿತಾಧಿಕಾರಿಗಳು ಈ ಹಳೆಯ ಸಾಂಕ್ರಾಮಿಕ ರೋಗಗಳನ್ನು ಮರೆತು ಸಾಕಷ್ಟು‌ ತಪ್ಪು ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡದಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ. ಜನ ಜಾಗೃತಿ, ಔಷಧ ಸಿಂಪಡಣೆ ಸೇರಿದಂತೆ ಇತರೆ ಕಾರ್ಯ ಮಾಡಬೇಕಿರುವ ಅಧಿಕಾರಿಗಳು ಇತ್ತ ಗಮನವೆ ಹರಿಸಿಲ್ಲ. ಮೊದಲು ರೋಗ ಹರಡುವ ಸೊಳ್ಳೆಗಳನ್ನು‌ ನಿಯಂತ್ರಿಸುವ ಕಾರ್ಯ ನಡೆಸಬೇಕಿದೆ. ನೀರು‌ ನಿಲ್ಲದಂತೆ ನೋಡಿಕೊಂಡು, ಔಷಧಿ ಸಿಂಪಡಣೆ ಮಾಡಬೇಕಿದೆ. ಆದರೆ ಇದನ್ನು ಮಾಡದೆ ನಿರ್ಲಕ್ಷ್ಯ ವಹಿಸುತ್ತಿವೆ ಎನ್ನುತ್ತಾರೆ ಶಿವಮೊಗ್ಗದ ನಾಗರಿಕರು.

ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಇಳಿಮುಖ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸಾಂಕ್ರಾಮಿಕ ರೋಗಗಳು ಅಷ್ಟು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ‌ ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷ - ಈ ವರ್ಷ :

  • ಡೆಂಗ್ಯೊ- 696 -132
  • ಮಲೇರಿಯಾ- 14-01
  • ಚಿಕನ್ ಗುನ್ಯಾ- 526 - 92
  • ಕೆಎಫ್ ಡಿ- 343-177
  • H1N1 - 143- 73
    ಕೊರೊನಾ ಹಾವಳಿ: ಇತರೆ ಸಾಕ್ರಾಮಿಕ ರೋಗಗಳನ್ನು ಮರೆತ ಜಿಲ್ಲಾಡಳಿತ..

ಕಳೆದ ವರ್ಷ ಕೆಎಫ್ ಡಿಗೆ 12 ಮಂದಿ ಬಲಿಯಾಗಿದ್ದರು. ಈ ವರ್ಷ 3 ಸಾವು ಸಂಭವಿಸಿವೆ. ಆದರೆ ಇನ್ನೂ ಈ ವರ್ಷ ಮುಗಿಯಲು ಸಾಕಷ್ಟು ಸಮಯವಿರುವುದರಿಂದ ಇನ್ನಷ್ಟು ಸಾಂಕ್ರಾಮಿಕ‌ ರೋಗ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳಿವೆ. ಕೊರೊನಾದ‌ ನಡುವೆ ಆಶಾ ಕಾರ್ಯಕರ್ತೆಯರು, ಮನೆ ಮನೆಗೆ ಹೋಗಿ ಸ್ವಾಬ್​‌ ಸಂಗ್ರಹಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಂಡು ಬರುವುದರಿಂದ ಜನರಲ್ಲಿ ಜಾಗೃತಿ‌ ಮೂಡಿಸಬೇಕಿದೆ. ಆರೋಗ್ಯ ಇಲಾಖೆಯ ಸಹಾಯಕಿಯರು, ಆಶಾ‌ ಕಾರ್ಯಕರ್ತೆಯರು ಸೇರಿದಂತೆ ಲಿಂಕ್ ವರ್ಕಸ್ ಮೂಲಕ‌ ಎಲ್ಲಾ ಮಾಹಿತಿಯನ್ನು ಪಡೆಯಲಾಗುತ್ತಿದೆ. ಎಲ್ಲಿ ಪ್ರಕರಣಗಳು ಹೆಚ್ಚು ‌ಕಂಡು ಬರುತ್ತವೆಯೋ ಅಲ್ಲಿ ಗಮನ ನೀಡಿ ರೋಗ ಹತೋಟಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ‌ ಸರ್ವೇಕ್ಷಾಧಿಕಾರಿ ಡಾ.ಶಂಕರಪ್ಪ ತಿಳಿಸಿದ್ದಾರೆ.

Last Updated : Jul 19, 2020, 3:24 PM IST

ABOUT THE AUTHOR

...view details