ಶಿವಮೊಗ್ಗ:ಧರ್ಮಸ್ಥಳ ಸಂಘದ ಮೂಲ ಉದ್ದೇಶ ಬದಲಾವಣೆ ಹಾಗೂ ಅಭಿವೃದ್ಧಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಇಂದು ಮತ್ತು ನಾಳೆ ಶಿವಮೊಗ್ಗ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಹೆಗ್ಗಡೆಯವರಿಂದು ತೀರ್ಥಹಳ್ಳಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನ ಕಾರ್ಯಾಲಯಕ್ಕೆ ಭೇಟಿ ನೀಡಿ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 40 ವರ್ಷದ ಸಾಧನೆ. ಸಾಮಾಜಿಕ ಸೇವೆಗೆ ಹೆಚ್ಚು ಒತ್ತು ಕೊಟ್ಟು, ಸಂಘಟನಾ ಶಕ್ತಿ ಹೆಚ್ಚಿಸಲಾಗಿದೆ. ಧರ್ಮಸ್ಥಳ ಸಂಘದ ನೆರವಿನಿಂದ ಪಾಲುದಾರ ಬಂಧುಗಳು ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯಾಗಿದ್ದಾರೆ. ಬದಲಾವಣೆ ನಮ್ಮ ಸಂಸ್ಥೆಯ ಮೂಲ ಉದ್ದೇಶ. ಅಭಿವೃದ್ಧಿಯೇ ಈ ಸಂಸ್ಥೆಯ ಆಶಯ. ಬದಲಾವಣೆಯ ಹರಿಕಾರ ಎಂಬ ಬಿರುದನ್ನು ಸಂಸ್ಥೆ ಪಡೆದಿದೆ ಎಂದರು.
ಹಾಗಾಗಿ ಇತ್ತೀಚೆಗೆ ಎಲ್ಲ ಸಂಘಗಳು ಆನ್ಲೈನ್ ಮೂಲಕ ಡಿಜಿಟಲ್ ಲೋನ್ ರಿಕ್ವೆಸ್ಟ್ ಆ್ಯಪ್ ಮೂಲಕ ಕೇವಲ ಎರಡರಿಂದ ಐದು ದಿನದೊಳಗೆ ಸಾಲ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರಿಗೂ ತಮಗೆ ಸಾಮರ್ಥ್ಯ ಇರುವಷ್ಟು ಆರ್ಥಿಕ ಬಂಡವಾಳವನ್ನು ಕೇವಲ ಗುಂಪು ಭದ್ರತೆಯ ಮೂಲಕ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದರು. ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆಗಳ ಹೂಳೆತ್ತುವ ಕೆಲಸ ಮಾಡುತ್ತಿದ್ದು, ತೀರ್ಥಹಳ್ಳಿಯ ಏಳು ಕೆರೆಗಳ ಕಾಮಗಾರಿಯನ್ನು ಮುಗಿಸಲಾಗಿದೆ. ಮಲೆನಾಡಿನಲ್ಲಿ ನೀರಿನ ಸಂಗ್ರಹವನ್ನು ಅತಿ ಮುಖ್ಯವಾಗಿ ಮಾಡಬೇಕಿದೆ ಎಂದು ಹೇಳಿದರು.
ಸಿಎಸ್ಸಿ ಕೇಂದ್ರಗಳ ಮೂಲಕ 10,000 ಕಡೆಯಲ್ಲಿ ಸಾಮಾಜಿಕ ಸೇವೆಗಳಾದ ಇ ಶ್ರಮ ಕಾರ್ಡ್, ಆಯುಷ್ಮಾನ್ ಕಾರ್ಡ್, ಪಾನ್ ಕಾರ್ಡ್, ಭಾರತ್ ಬಿಲ್ ಪೇಮೆಂಟ್, ಎನ್ಪಿಎಸ್, ರೈಲ್ವೆ ಟಿಕೆಟ್ ಬುಕಿಂಗ್, ಫಸಲ್ ಭೀಮಾ ಯೋಜನೆಯಂತ ಸೇವೆಗಳನ್ನು ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಧರ್ಮಸ್ಥಳ ಯೋಜನೆಯ ಸಿಎಸ್ಸಿ ಕೇಂದ್ರದ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.