ಶಿವಮೊಗ್ಗ: ರಾಜ್ಯಕ್ಕೆ ಹೆಚ್.ಡಿ.ದೇವೇಗೌಡರ ಕುಟುಂಬ ಅನೇಕ ಕೂಡುಗೆಗಳನ್ನು ನೀಡಿದೆ. ಇದನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಮರೆಯಬಾರದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.
ಪಂಚರತ್ನ ರಥ ಯಾತ್ರೆ ಅಂಗವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಲವಗೊಪ್ಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ದೇವೇಗೌಡರು ತಮ್ಮ ಅವಧಿಯಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಿದರು. ರಾಜ್ಯದಲ್ಲಿ ಕೆಎಂಎಫ್ ಬೆಳೆಸಿದ್ದಕ್ಕೆ ಹೆಚ್.ಡಿ.ರೇವಣ್ಣನವರೇ ಕಾರಣ. ಅವರೇ ಕೆಎಂಎಫ್ ಅನ್ನು ಇಷ್ಟು ದೊಡ್ಡ ಮಟ್ಟಕ್ಕೆ ತಂದವರು" ಎಂದರು.
"ನಿನ್ನೆ ಮಂಡ್ಯದಲ್ಲಿ ಸಿ.ಟಿ.ರವಿ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟಬೇಕು ಎಂದು ಹೇಳುತ್ತಿದ್ದಾರೆ ಅಂತಾ ದೇವೇಗೌಡರ ಹೆಸರನ್ನು ಹೇಳದೆ ಪರೋಕ್ಷವಾಗಿ ಮಾತನಾಡಿದ್ದರು. ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಮೊದಲು ಅದನ್ನು ತೆಗೆದುಹಾಕಿ" ಎಂದು ವಾಗ್ದಾಳಿ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.
ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆ ಇದೆ. ಈ ಸಮಸ್ಯೆಗಳ ಪರಿಹಾರಕ್ಕೆ ನಮಗೆ ಒಂದು ಬಾರಿ ಪೂರ್ಣ ಬಹುಮತ ನೀಡಿ ಎಂದು ರಾಜ್ಯದ ಜನತೆಯಲ್ಲಿ ವಿನಂತಿಸಿಕೊಂಡರು. ಇದೇ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣದ ನಿರಾಶ್ರಿತರಿಗೆ ಮೊದಲು ಪರಿಹಾರ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಜೆಡಿಎಸ್ ಜನರ ಬಿ ಟೀಮ್: "ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಅವರು ನಮ್ಮ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಕರೆಯುತ್ತಿದ್ದಾರೆ. ಅದೇ ರೀತಿ ಬಿಜೆಪಿಯವರು ಸಹ ನಮ್ಮ ಪಕ್ಷವನ್ನು ಕಾಂಗ್ರೆಸ್ನ ಬಿ ಟೀಮ್ ಎಂದು ಕರೆಯುತ್ತಿದ್ದಾರೆ. ಆದರೆ, ನಮ್ಮದು ಜನರ ಬಿ ಟೀಂ" ಎಂದರು.
ಇದನ್ನೂ ಓದಿ:ಕೆಲ ಹಳ್ಳಿಗಳಲ್ಲಿ ಜನರ ಬದುಕು ನೋಡಿ ಭಾರಿ ಬೇಸರವಾಯಿತು: ಹೆಚ್ ಡಿ ಕುಮಾರಸ್ವಾಮಿ
125 ಸ್ಥಾನ ಗೆಲ್ಲುವ ಗುರಿ: "ಕಳೆದ ಎರಡು ಚುನಾವಣೆಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ನಮ್ಮ ಪಕ್ಷದ ಬಗ್ಗೆ ಭಾರಿ ಒಲವು ವ್ಯಕ್ತವಾಗಿದೆ. ನಾವು ಹೋಗಿದ್ದ ಕಡೆ ಕೇವಲ ಜನ ಸೇರುತ್ತಾರೆ, ಅದು ಮತವಾಗಿ ಪರಿವರ್ತನೆ ಆಗುವುದಿಲ್ಲ ಎಂಬ ಮಾತಿತ್ತು. ಆದ್ರೆ, ಈ ಬಾರಿ ಸುಳ್ಳಾಗುತ್ತದೆ. ಖಂಡಿತ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದಕ್ಕಾಗಿ ನಾನು ಒಂದು ವರ್ಷದಿಂದ ತಯಾರಿ ನಡೆಸಿದ್ದೇನೆ. ನಮ್ಮದು 125 ಸ್ಥಾನ ಗೆಲ್ಲುವ ಟಾರ್ಗೆಟ್ ಇದೆ. ಇದಕ್ಕಾಗಿ ನಾನು ಗೆಲ್ಲುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ಪ್ರತಿ ಗ್ರಾಮದ ಜನರನ್ನು ಭೇಟಿ ಆಗುತ್ತಿದ್ದೇನೆ. ಹಾಸನದಲ್ಲಿ ಭವಾನಿ ರೇವಣ್ಣನವರು ನಮ್ಮ ಪಕ್ಷದ ಪರವಾಗಿ ಇಂದಿನಿಂದ ಕಣಕ್ಕೆ ಇಳಿಯಲಿದ್ದಾರೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ" ಎಂದು ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ:ಸೀರೆ ಹಂಚಿ ರಾಜಕೀಯ ಮಾಡ್ಬೇಕಾ?: ಸಿ.ಪಿ.ಯೋಗೇಶ್ವರ್ ವಿರುದ್ದ ಹೆಚ್‌ಡಿಕೆ ವಾಗ್ದಾಳಿ
ಬಿಎಸ್‌ವೈ ವಿದಾಯ ಭಾಷಣ ವಿಚಾರ: ಎಲ್ಲರೂ ಒಂದು ದಿನ ಹೊರಗೆ ಬರಬೇಕು. ಅದೇ ರೀತಿ ಯಡಿಯೂರಪ್ಪನವರು ವಿದಾಯದ ಭಾಷಣ ಮಾಡಿದ್ದಾರೆ. ಎಲ್ಲರೂ ಒಂದಲ್ಲೊಂದಿನ ವಿದಾಯ ಹೇಳಲೇಬೇಕು. ಯಡಿಯೂರಪ್ಪನವರು ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದು ಹೇಳಿದ್ದಾರೆ. ಆದ್ರೆ, 2013 ರ ಚುನಾವಣೆಯಲ್ಲಿ ಅವರು ಕೆಜೆಪಿ ಕಟ್ಟಿದಾಗ ಆಡಿದ ಮಾತುಗಳನ್ನು ಮರೆಯಬಾರದು ಎಂದರು.