ಕರ್ನಾಟಕ

karnataka

ETV Bharat / state

'ಆಪ್ತಮಿತ್ರ' ಇಲ್ಲಿ 300 ದಿನ ಪ್ರದರ್ಶನ ಕಂಡಿತ್ತು! ಇತಿಹಾಸದ ಪುಟ ಸೇರ್ತಿದೆ ಶಿವಮೊಗ್ಗದ ಲಕ್ಷ್ಮೀ ಟಾಕೀಸ್ - lakshmi theatre in shivamogga

40 ವರ್ಷಗಳ ಕಾಲ ಶಿವಮೊಗ್ಗದ ಜನರ ಮನರಂಜನೆಗೆ ವೇದಿಕೆಯಾಗಿದ್ದ ಲಕ್ಷ್ಮೀ ಟಾಕೀಸ್ ಇದೀಗ ಇತಿಹಾಸದ ಪುಟ ಸೇರುತ್ತಿದೆ. ಚಿತ್ರಮಂದಿರವನ್ನು ನೆಲಸಮಗೊಳಿಸಲು ಮಾಲೀಕರು ನಿರ್ಧರಿಸಿದ್ದಾರೆ.

lakshmi theatre
ಲಕ್ಷ್ಮೀ ಚಿತ್ರಮಂದಿರ

By

Published : Mar 20, 2023, 7:04 AM IST

Updated : Mar 20, 2023, 8:51 AM IST

ಶಿವಮೊಗ್ಗದ ಲಕ್ಷ್ಮೀ ಟಾಕೀಸ್

ಶಿವಮೊಗ್ಗ: ನಾಲ್ಕು ದಶಕಗಳ ಕಾಲ ಇಲ್ಲಿಯ ಜನರಿಗೆ ಮನರಂಜನೆ ನೀಡಿದ್ದ ಲಕ್ಷ್ಮೀ ಫಿಲಂ ಟಾಕೀಸ್ ಇನ್ನು ನೆನಪು ಮಾತ್ರ. ಏಕೆಂದರೆ ಚಿತ್ರಮಂದಿರವನ್ನು ತೆರವುಗೊಳಿಸಲು ಮಾಲೀಕರು ನಿರ್ಧರಿಸಿದ್ದಾರೆ. ಈ ಮೂಲಕ ಥಿಯೇಟರ್‌ ನಗರದ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಕಳಚಿಕೊಳ್ಳುತ್ತಿದೆ.

ಕುತೂಹಲದ ವಿಚಾರಗಳು:1984ರಲ್ಲಿ ಹೊಸಮನೆ ಬಡಾವಣೆ ಸಮೀಪ ಶ್ರೀ ಲಕ್ಷ್ಮೀ ಟಾಕೀಸ್ ಆರಂಭವಾಯಿತು. ಡಿ.ಲಕ್ಕಪ್ಪ ಅವರು ಇದರ ಮಾಲೀಕರಾಗಿದ್ದರು. ಡಾ.ರಾಜ್‌ಕುಮಾರ್ ಅಭಿನಯದ ‘ಶ್ರೀನಿವಾಸ ಕಲ್ಯಾಣ’ ಇಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ.

ಟಾಕೀಸ್​ಗೆ ಲಕ್ಷ್ಮೀ ಎಂಬ ಹೆಸರು ಬರಲು ಎರಡು ಕಾರಣವಿದೆ. 'ಈಟಿವಿ ಭಾರತ'ದ ಜೊತೆ ಮಾತನಾಡಿದ ಮಾಲೀಕ ಡಿ.ಲಕ್ಕಪ್ಪ ಅವರ ಮೊಮ್ಮಗ ಅಶೋಕ್, "ನಮ್ಮ ಮನೆ ದೇವರು ಶ್ರೀ ಹಟ್ಟಿ ಲಕ್ಕಮ್ಮ. ನಮ್ಮ ಅಜ್ಜಿಯ ಹೆಸರು ಲಕ್ಷ್ಮಮ್ಮ. ಇದೇ ಕಾರಣಕ್ಕೆ ಲಕ್ಷ್ಮೀ ಟಾಕೀಸ್ ಹೆಸರು ಬಂತು. ನಮ್ಮ ಮನೆಯಿಂದ ಹಿಡಿದು ಎಲ್ಲದಕ್ಕೂ ನಾವು ಲಕ್ಷ್ಮೀ ಹೆಸರನ್ನೇ ಇಟ್ಟಿದ್ದೇವೆ" ಎಂದು ತಿಳಿಸಿದರು.

ಶಿವಮೊಗ್ಗದ ಮೊದಲ ಮತ್ತು ಏಕೈಕ ಏರ್ ಕೂಲ್ಡ್ ಆಡಿಟೋರಿಯಂ ಇದಾಗಿತ್ತು. 'ಗಾಂಧಿ ಕ್ಲಾಸ್', ಬಾಲ್ಕನಿ ಸೇರಿ ಒಟ್ಟು 928 ಸೀಟುಗಳಿವೆ. ಹಿಂದೆಲ್ಲಾ ಇಲ್ಲಿಗೆ ಸಿನಿಮಾ ನೋಡಲು ಅಕ್ಕಪಕ್ಕದ ಊರುಗಳಿಂದ ಜನರು ಬರುತ್ತಿದ್ದರು. ಎತ್ತಿನಗಾಡಿ ಕಟ್ಟಿಕೊಂಡು, ಟ್ರ್ಯಾಕ್ಟರ್​ಗಳಲ್ಲಿ ಕುಟುಂಬಸಹಿತ ಪ್ರೇಕ್ಷಕರು ಆಗಮಿಸುತ್ತಿದ್ದ ನಿದರ್ಶನಗಳಿವೆ. ಹಲವು ಬಾರಿ ಇಡೀ ರಾತ್ರಿ ಕಾದಿದ್ದು, ಬೆಳಗ್ಗೆ ಮೊದಲ ಪ್ರದರ್ಶನದಲ್ಲಿ ತಮ್ಮ ನೆಚ್ಚಿನ ನಟ, ನಟಿಯರ ಸಿನಿಮಾಗಳನ್ನು ಜನರು ವೀಕ್ಷಿಸಿ ಸಂಭ್ರಮಿಸುತ್ತಿದ್ದರು.

ಚಿತ್ರಮಂದಿರದ ಪಕ್ಕದಲ್ಲಿರುವ ಸರ್ಕಲ್ ಕೂಡ ಲಕ್ಷ್ಮೀ ಟಾಕೀಸ್ ಸರ್ಕಲ್ ಎಂದೇ ಜನಪ್ರಿಯ. ವಾಸ್ತವದಲ್ಲಿ ಇದು ಶಾಂತವೇರಿ ಗೋಪಾಲಗೌಡ ಸರ್ಕಲ್. ಆದರೆ, ಜನರು ಚಿತ್ರಮಂದಿರದ ಹೆಸರಿನೊಂದಿಗೆ ಸರ್ಕಲ್ ಮತ್ತು ಸುತ್ತಮುತ್ತಲ ರಸ್ತೆಯನ್ನು ಗುರುತಿಸುತ್ತಾರೆ. ಹಾಗಾಗಿ, ಲಕ್ಷ್ಮೀ ಟಾಕೀಸ್ ಶಿವಮೊಗ್ಗದ ಪ್ರಮುಖ ಲ್ಯಾಂಡ್ ಮಾರ್ಕ್ ಕೂಡಾ ಹೌದು.

ಡಾ.ವಿಷ್ಣುವರ್ಧನ್ ಮತ್ತು ಸೌಂದರ್ಯ ಅಭಿನಯದ ಆಪ್ತಮಿತ್ರ ಸಿನಿಮಾ ಇಲ್ಲಿ ದಾಖಲೆಯ ಪ್ರದರ್ಶನ ಕಂಡಿದೆ. 300 ದಿನಗಳ ಕಾಲ ಸಿನಿಮಾ ಪ್ರದರ್ಶನವಾಗಿತ್ತು. ರಾಜ್ಯದ ಐದಾರು ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ 300 ದಿನ ಪ್ರದರ್ಶನವಾಗಿತ್ತು. ಅದರಲ್ಲಿ ಲಕ್ಷ್ಮೀ ಟಾಕೀಸ್ ಸಹ ಒಂದು.

ಟಾಕೀಸ್​ಗೆ ವಿವಿಧ ಸಂದರ್ಭದಲ್ಲಿ ಹಲವು ನಟ, ನಟಿಯರು ಭೇಟಿ ಕೊಟ್ಟಿದ್ದುಂಟು. ಚಿತ್ರಮಂದಿರದ ಉದ್ಘಾಟನಾ ಸಮಾರಂಭಕ್ಕೆ ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ಪ್ರಭಾಕರ್ ಆಗಮಿಸಿದ್ದರು. ಆಪ್ತಮಿತ್ರ ಸಕ್ಸಸ್ ಹಿನ್ನೆಲೆಯಲ್ಲಿ ನಟ, ನಿರ್ಮಾಪಕ ದ್ವಾರಕೀಶ್, ಡಾ.ವಿಷ್ಣುವರ್ಧನ್, ನಟಿ ಪ್ರೇಮಾ ಬಂದಿದ್ದರು. 'ನಿನಗಾಗಿ' ಸಿನಿಮಾ ನಿರಂತರ 200 ದಿನ ಪ್ರದರ್ಶನ ಕಂಡಾಗ ನಿರ್ದೇಶಕ ಪ್ರೇಮ್ ಭೇಟಿ ಕೊಟ್ಟಿದ್ದರು. ಇನ್ನುಳಿದಂತೆ ನಟರಾದ ಸುದೀಪ್, ದರ್ಶನ್ ತೂಗುದೀಪ, ಆದಿತ್ಯ, ಡಾಲಿ ಧನಂಜಯ ಸೇರಿದಂತೆ ಹಲವರು ಇಲ್ಲಿಗೆ ಆಗಮಿಸಿದ್ದಾರೆ. ನಟ ಸುದೀಪ್, ಅನೂಪ್ ಭಂಡಾರಿ, ನಟಿಯರಾದ ನೀತಾ ಅಶೋಕ್, ಜಾಕ್ವೆಲೀನ್ ಫರ್ನಾಂಡೀಸ್ ಅಭಿನಯದ 'ವಿಕ್ರಾಂತ್ ರೋಣ' ಲಕ್ಷ್ಮೀ ಟಾಕೀಸಿನಲ್ಲಿ ಪ್ರದರ್ಶನಗೊಂಡ ಕೊನೆಯ ಕನ್ನಡ ಸಿನಿಮಾವಾಗಿದೆ.

ಇದನ್ನೂ ಓದಿ:ಕೆಜಿಎಫ್‌, ಕಾಂತಾರ ಆಯ್ತು ಮುಂದೇನು?: ಹೊಂಬಾಳೆ ಸಂಸ್ಥೆಯಿಂದ ಬರಲಿವೆ ಈ ಸಿನಿಮಾಗಳು!

ಚಿತ್ರಮಂದಿರ ತೆರವು ಕುರಿತು ಮಾತನಾಡಿದ ಅಶೋಕ್, "ಹೊಸ ಪೀಳಿಗೆಯ ಪ್ರೇಕ್ಷಕರು ಅಪ್‌ಡೇಟ್ ಕೇಳುತ್ತಾರೆ. ಇದೇ ಕಾರಣಕ್ಕೆ ಮಾಲ್​ಗಳಲ್ಲಿರುವ ಮಲ್ಟಿಪ್ಲೆಕ್ಸ್‌ಗಳಿಗೆ ಹೋಗಿ ಬರುತ್ತಾರೆ. ನಮ್ಮಲ್ಲಿ ಒಂದೇ ಸಿನಿಮಾ ಪ್ರದರ್ಶನ ಮಾಡಬೇಕು. ಮಾಲ್​ನಲ್ಲಿ ನಾಲ್ಕು ವಿಭಿನ್ನ ಸಿನಿಮಾಗಳನ್ನು ಒಮ್ಮೆಲೆ ಪ್ರದರ್ಶಿಸಬಹುದು. ಜನರಿಗೆ ಯಾವ ಸಿನಿಮಾ, ಯಾವ ಸಮಯ ಹೊಂದಿಕೆಯಾಗುತ್ತದೋ ಅದರಂತೆ ಚಿತ್ರ ನೋಡಲು ಹೋಗುತ್ತಾರೆ. ನಾವು ಕೂಡಾ ಅಪ್‌ಡೇಟ್ ಆಗುತ್ತಿದ್ದೇವೆ. ಈಗಾಗಲೇ ತೆರವು ಕೆಲಸ ಆರಂಭವಾಗಿದೆ. ಪರದೆ, ಸೀಟುಗಳು, ಸ್ಪೀಕರ್, ಪ್ರೊಜೆಕ್ಟರ್ ಎಲ್ಲವನ್ನೂ ತೆಗೆಯಲಾಗಿದೆ" ಎಂದು ತಿಳಿಸಿದರು.

ಕೋವಿಡ್ ತಂದೊಡ್ಡಿದ ಸಂಕಷ್ಟ:"ಕೋವಿಡ್ ಬಳಿಕ ಚಿತ್ರಮಂದಿರದವರಿಗೆ ತುಂಬಾ ಸಮಸ್ಯೆಯಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ, ನಿರ್ವಹಣೆ ವೆಚ್ಚ ನಿಭಾಯಿಸಲು ಕಷ್ಟವಾಯಿತು. ಲಕ್ಷ್ಮೀ ಟಾಕೀಸ್ ರೀತಿಯ ಹಲವು ಸಿಂಗಲ್ ಸ್ಕ್ರೀನ್ ಅಥವಾ ಸೋಲೋ ಟಾಕೀಸ್​ಗಳು ದೇಶಾದ್ಯಂತ ಬಂದ್ ಆಗಿವೆ. ಸರ್ಕಾರದಿಂದ ಒಂದು ವರ್ಷ ತೆರಿಗೆ ಕಂದಾಯದಲ್ಲಿ ಸ್ವಲ್ಪ ಪ್ರಮಾಣದ ವಿನಾಯಿತಿ ನೀಡಿಲಾಗಿತ್ತು. ಆದರೂ ನಿರ್ವಹಣೆ ಕಷ್ಟವಾಯಿತು. ಪ್ರತೀ ತಿಂಗಳು ನಿರ್ವಹಣೆಗೆ ಒಂದೂವರೆ ಲಕ್ಷ ರೂಪಾಯಿ ಬೇಕಿತ್ತು. ಸಿಬ್ಬಂದಿ ಸಂಬಳ, ಕಂದಾಯ, ವಿದ್ಯುತ್ ಬಿಲ್ ಸೇರಿ ಹಲವು ಬಗೆಯ ಖರ್ಚುಗಳಿರುತ್ತವೆ. ಇದನ್ನು ನಿಭಾಯಿಸಲು ಕಷ್ಟವಾಗಿ ಯೋಚನೆ ಮಾಡಬೇಕಾಗಿದೆ. ಒಟಿಟಿ ಪ್ಲಾಟ್ ಫಾರಂಗಳು ಕೂಡ ಚಿತ್ರಮಂದಿರಗಳಿಗೆ ಸವಾಲಾಗಿವೆ" ಎನ್ನುತ್ತಾರೆ ಅಶೋಕ್.

ಮುಂದೇನು..?:ಈಗಿರುವ ಲಕ್ಷ್ಮೀ ಟಾಕೀಸ್ ಕಟ್ಟಡವನ್ನು ಕೆಡವಲಾಗುತ್ತಿದೆ. ಇದೇ ಜಾಗದಲ್ಲಿ ಮಿನಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಸಿಟಿ ಸೆಂಟರ್ ಮಾದರಿಯಲ್ಲೇ ಇಲ್ಲಿಯೂ ವಿವಿಧ ಮಳಿಗೆಗಳು ಬರಲಿವೆ. ಕೊನೆಯ ಮಹಡಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ನಿರ್ಮಿಸಲು ಉದ್ದೇಶಿಸಲಾಗಿದೆ.

ವಿನಾಯಕ ಚಿತ್ರಮಂದಿರ ತೆರವು: ಶಿವಮೊಗ್ಗದಲ್ಲಿ ಕಳೆದೆರಡು ವರ್ಷದಲ್ಲಿ ಎರಡು ಚಿತ್ರ ಮಂದಿರಗಳು ಇತಿಹಾಸದ ಪುಟ ಸೇರಿವೆ. ಈ ಹಿಂದೆ ಬಿ.ಹೆಚ್.ರಸ್ತೆಯಲ್ಲಿದ್ದ ವಿನಾಯಕ ಚಿತ್ರಮಂದಿರ ಸಂಕಷ್ಟಕ್ಕೆ ಸಿಲುಕಿದ ಕಾರಣ ತೆರವು ಮಾಡಲಾಗಿತ್ತು. ಸದ್ಯಕ್ಕೆ ಶಿವಮೊಗ್ಗದಲ್ಲಿ ಶಿವಪ್ಪನಾಯಕ ಮಾಲ್​ನಲ್ಲಿ ಭಾರತ್ ಸಿನಿಮಾಸ್ ಎನ್ನುವ ಮಲ್ಟಿ ಫ್ಲೆಕ್ಸ್ ಇದ್ದರೆ ಮಂಜುನಾಥ, ವೀರಭದ್ರೇಶ್ವರ, ಹೆಚ್.ಪಿ.ಸಿ ಮಲ್ಲಿಕಾರ್ಜುನ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ.

Last Updated : Mar 20, 2023, 8:51 AM IST

ABOUT THE AUTHOR

...view details