ಶಿವಮೊಗ್ಗ: ಅತಿ ಕಡುಬಡವರಿಗೆಂದೇ ಶಿವಮೊಗ್ಗ ಮಹಾನಗರ ಪಾಲಿಕೆ ಜಿ+2 ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಇದಕ್ಕೆ ಅರ್ಜಿ ಕೂಡ ಆಹ್ವಾನಿಸಿತ್ತು. ಸಾರ್ವಜನಿಕರು, ಹಗಲು ರಾತ್ರಿಯೆನ್ನದೇ, ಅರ್ಜಿಗಳಿಗೋಸ್ಕರ ಸರದಿ ಸಾಲಿನಲ್ಲಿ ನಿಂತು ಅರ್ಜಿ ಹಾಕಿ ಸುಮಾರು 2 ವರ್ಷಗಳೇ ಕಳೆದು ಹೋಗಿವೆ. ಆದ್ರೆ, ಇದುವರೆಗೂ ಮನೆಗಳ ನಿರ್ಮಾಣ ಕಾರ್ಯವಾಗಿಲ್ಲ.
ಇಲ್ಲಿ ನೋಡೋಕೆನೋ, ನಿಮಗೆ ಒಳ್ಳೆ ಮನೆಗಳ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ ಅಂತಾ ಅನಿಸಬಹುದು. ಆದ್ರೆ, ಕಳೆದ 2 ವರ್ಷಗಳಿಂದ ಕಟ್ಟಬೇಕಾಗಿದ್ದ 3 ಸಾವಿರ ಮನೆಗಳ ಪೈಕಿ ಕೇವಲ 8-10 ಮನೆಗಳಷ್ಟೇ ನಿರ್ಮಾಣಗೊಂಡಿವೆ. ಪಾಲಿಕೆ ವತಿಯಿಂದ ನಡೆಸಲಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಫಲಾನುಭವಿಗಳು ಮಾತ್ರ ತೊಂದರೆ ಅನುಭವಿಸುವಂತಾಗಿದೆ.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ, ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪ ಬಡಾವಣೆಯಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಜಿ+2 ಮಾದರಿಯಲ್ಲಿ ಮನೆಗಳನ್ನು ಕಟ್ಟುವಲ್ಲಿ ಪಾಲಿಕೆ ವಿಳಂಬ ಧೋರಣೆ ತಳೆದಿದೆ ಎಂಬ ಆರೋಪ ಕೇಳಿ ಬಂದಿದೆ. 2017-18 ರಲ್ಲಿ ಆರಂಭಗೊಂಡಿರುವ ಈ ಮನೆಗಳ ಕಾಮಗಾರಿಗಳನ್ನು 24 ತಿಂಗಳಲ್ಲಿ ಮುಗಿಸಬೇಕೆಂಬ ಟೆಂಡರ್ ನಿಯಮವಿದ್ದರೂ ಕೂಡ, 20 ತಿಂಗಳು ಕಳೆದರೂ ಕೇವಲ 8-10 ಮನೆಗಳ ನಿರ್ಮಾಣವಷ್ಟೇ ಆಗಿವೆ. ಸಾರ್ವಜನಿಕರು ಹಗಲು, ರಾತ್ರಿಯೆನ್ನದೇ, ಗಂಟೆಗಟ್ಟಲೇ ಕ್ಯೂ ನಲ್ಲಿ ನಿಂತು ಅರ್ಜಿ ಹಾಕಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಂದ 50 ಸಾವಿರ ರೂ. ಹಾಗೂ ಇತರೇ ಫಲಾನುಭವಿಗಳಿಂದ, 80 ಸಾವಿರ ರೂ ಯಂತೆ, ಸುಮಾರು 19 ಕೋಟಿ ರೂ. ಗಳನ್ನು ಕ್ರೋಢೀಕರಿಸಲಾಗಿದೆ.
3 ಸಾವಿರ ಮನೆಗಳಲ್ಲಿ ನಿರ್ಮಾಣ ಆಗಿದ್ದು 24 ಮಾತ್ರ ಈಗಾಗಲೇ, ಈ ಮನೆಗಳ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರ ಮುಂದಾಗಿದ್ದು, ಆದ್ರೆ, 20 ತಿಂಗಳುಗಳು ಕಳೆದರೂ ಕೂಡ, 3 ಸಾವಿರ ಮನೆಗಳ ಪೈಕಿ, ಕೇವಲ 8-10 ಮನೆಗಳಷ್ಟೇ ನಿರ್ಮಾಣವಾಗುತ್ತಿದ್ದು, ಇದಕ್ಕೆ ಫಲಾನುಭವಿಗಳು, ಪಾಲಿಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ, ಫಲಾನುಭವಿಗಳು, ಆಶ್ರಯ ಯೋಜನೆಗೆ ಸಾಲ ಮಾಡಿ, ವಡವೆ ಅಡವಿಟ್ಟು, ಹಣ ಕಟ್ಟಿರುವುದು ಒಂದೆಡೆಯಾದ್ರೆ, ಮತ್ತೊಂದೆಡೆ, ಈಗಿರುವ ಮನೆಗಳಿಗೆ ಬಾಡಿಗೆ ಕೂಡ ಕಟ್ಟಬೇಕಾದ ಪರಿಸ್ಥಿತಿ ಇದ್ದು, ಬೇಗನೇ ಸ್ವಂತ ಸೂರು ಸಿಗುತ್ತೆ ಅಂತಾ ಭರವಸೆ ಇಟ್ಟುಕೊಂಡವರಿಗೆ ನಿರಾಸೆಯಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪಾಲಿಕೆ ನಿಧಿಯಡಿಯಲ್ಲಿ, ಕಳೆದ 24 ತಿಂಗಳಲ್ಲಿ 3 ಸಾವಿರ ಮನೆಗಳನ್ನು ನಿರ್ಮಾಣ ಮಾಡಬೇಕಿದ್ದು, ಇದರ ಅಂದಾಜು ಮೊತ್ತ 199 ಕೋಟಿ ರೂ. ಯಾಗಿರುತ್ತದೆ. ಈಗಾಗಲೇ, ಮನೆಗಳ ನಿರ್ಮಾಣ ಮಾಡುವ ಟೆಂಡರ್ ಅವಧಿ ಕೂಡ 2020 ರ ಫೆಬ್ರವರಿ 27 ಕ್ಕೆ ಮುಕ್ತಾಯಗೊಂಡಿದ್ದು, ಈಗಾಗಲೇ, 2 ವರ್ಷಗಳು ಮುಗಿದು ಹೋಗಿದ್ದು, ತಮ್ಮ ಮನೆಗಳಿಗೆ ಹೋಗಲು ಫಲಾನುಭವಿಗಳು, ಇನ್ನೂ ಮೂರು ವರ್ಷಗಳು ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ರೀತಿ ವಿಳಂಬ ನೀತಿ ತೋರುತ್ತಿರುವ ಪಾಲಿಕೆ ಕ್ರಮಕ್ಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ, ಇದಕ್ಕೆ ಉತ್ತರಿಸಬೇಕಾದ ಅಧಿಕಾರಿಗಳು ಮಾತ್ರ ತಮ್ಮ ಕಾರ್ಯವೈಖರಿ ಸಮರ್ಥಿಸಿಕೊಳ್ಳುವ ಹೇಳಿಕೆಯಷ್ಟೇ ನೀಡುತ್ತಿದ್ದಾರೆ.