ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದ್ದು, ಖಾಸಗಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಒದಗಿಸಲು ಮುಂದೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಎಂಎ, ಕೆಪಿಎಂಇ ಸೇರಿದಂತೆ ವಿವಿಧ ವೈದ್ಯಕೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆಸಿದರು. ಮೆಗ್ಗಾನ್ ಆಸ್ಪತ್ರೆಗೆ ಅಗತ್ಯವಿರುವ ಡಿ ಗ್ರೂಪ್ ಹಾಗೂ ನರ್ಸ್‍ಗಳ ನೇಮಕಾತಿಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಕಾಯ್ದೆ ಪ್ರಕಾರ ಎಲ್ಲಾ ಎಂಬಿಬಿಎಸ್ ಪದವೀಧರರು ಕನಿಷ್ಠ ಒಂದು ವರ್ಷ ಸರ್ಕಾರಿ ಸೇವೆ ಮಾಡಬೇಕಾಗಿದ್ದು, ಕೆಲವೇ ದಿನಗಳಲ್ಲಿ ಈ ವರ್ಷದ ಹೊಸ ಪದವೀಧರರ ಸೇವೆ ಲಭ್ಯವಾಗಲಿದೆ. ಇದರ ಜತೆಯಲ್ಲೇ ಖಾಸಗಿ ವೈದ್ಯರು ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಬೇಕಾಗಿದೆ ಎಂದರು.
ಖಾಸಗಿ ವೈದ್ಯರ ಸೇವೆ ಪಡೆಯುವ ಕುರಿತು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆಸಕ್ತ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾಗುವುದು. ಈಗಾಗಲೇ ಒಟ್ಟು 30 ಖಾಸಗಿ ವೈದ್ಯರು ಸೇವೆ ಒದಗಿಸಲು ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದರು.
ವಿವಿಧ ವೈದ್ಯಕೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಈಗಾಗಲೇ ಸುಬ್ಬಯ್ಯ ಮೆಡಿಕಲ್ ಕಾಲೇಜು, ನಂಜಪ್ಪ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯದಲ್ಲಿ 600 ಬೆಡ್‍ಗಳು ಲಭ್ಯವಿದ್ದು, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ ಹಾಗೂ ಇನ್ನಿತರ ಕೋವಿಡ್ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯರ ಸೇವೆ ಪಡೆದುಕೊಳ್ಳುವ ಕುರಿತು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಸೇವೆ ಸಲ್ಲಿಸಲು ಮುಂದೆ ಬರುವ ವೈದ್ಯರಿಗೆ ಸೂಕ್ತ ಸಂಭಾವನೆ ನೀಡಲಾಗುವುದು ಎಂದು ಹೇಳಿದರು.