ಶಿವಮೊಗ್ಗ:''ರಾಜ್ಯದಲ್ಲಿ ಶೀಘ್ರದಲ್ಲಿಯೇ 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು'' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಶಿಕ್ಷಣ ಇಲಾಖೆಯಲ್ಲಿ ಮುಂದಿನ ವರ್ಷ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಗುಣಮಟ್ಟ, ಮೌಲ್ಯಯುತ ಶಿಕ್ಷಣ ನೀಡಬೇಕಿದೆ'' ಎಂದು ಹೇಳಿದರು.
''ಈಗಾಗಲೇ 9 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದೆ. 10 ಸಾವಿರ ಶಿಕ್ಷಕರ ನೇಮಕಾತಿಯನ್ನು ಕಲ್ಯಾಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. 4 ಸಾವಿರ ಶಿಕ್ಷಕರ ನೇಮಕಾತಿ ಪ್ರಕರಣ ಕೋರ್ಟ್ನಲ್ಲಿದ್ದು, ಅಕ್ಟೋಬರ್ 30ರಂದು ವಿಚಾರಣೆ ನಡೆಯಲಿದೆ. ಇಲ್ಲಿ ಇತ್ಯಾರ್ಥವಾದರೆ, ಕಲ್ಯಾಣ ಕರ್ನಾಟಕಕ್ಕೆ ಉಳಿದ 4 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು'' ಎಂದು ವಿವರಿಸಿದರು.
ಪೌಷ್ಟಿಕ ಆಹಾರ ನೀಡುವ ಕುರಿತು ತೀರ್ಮಾನ:''ಗುಣಮಟ್ಟದ ಶಿಕ್ಷಕರ ನೇಮಕ ಮಾಡಿಕೊಳ್ಳುವ ಆಲೋಚನೆಯಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ ಅಜೀಂ ಪ್ರೇಮ್ ಜೀ ಅವರ ಪ್ರತಿಷ್ಟಾನದ ಸಹಯೋಗದ ಜೊತೆಗೆ ತರಬೇತಿ ಒದಗಿಸುವ ಚಿಂತನೆ ಮಾಡಲಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕುರಿತು ತೀರ್ಮಾನ ಮಾಡಲಾಗಿದೆ. ನವೆಂಬರ್ 23 ರಂದು ಈ ಯೋಜನೆ ಘೋಷಣೆ ಮಾಡಲಾಗುವುದು'' ಎಂದ ಅವರು, ''ಸರ್ಕಾರಿ ಶಾಲೆ ಶೌಚಾಲಯ ಸೇರಿದಂತೆ ಇತರೆ ಸ್ವಚ್ಛತಾ ಕಾರ್ಯಗಳಿಗೆ ಹಿಂದಿನ ಸರ್ಕಾರ ವರ್ಷಕ್ಕೆ 50ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳಿಗೆ 10 ಸಾವಿರ ರೂ. ನೀಡುತ್ತಿತ್ತು. ಈಗ ನಮ್ಮ ಸರ್ಕಾರ ಬಂದ ಮೇಲೆ ವರ್ಷಕ್ಕೆ 20 ಸಾವಿರ ರೂ. ನೀಡಲಾಗುತ್ತಿದೆ. ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛತೆ ಮಾಡಿಸುವುದು ಖಂಡನೀಯ, ಆ ಕೆಲಸ ಆಗಬಾರದು'' ಎಂದರು.