ಶಿವಮೊಗ್ಗ: ಬೇರೆಯವನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ.
ಹೊಸನಗರ ತಾಲೂಕಿನ ಬೆಳ್ಳೂರಿನ ನಿವಾಸಿಯಾದ ಶಿವುಮೂರ್ತಿ ಸಾವನ್ನಪ್ಪಿದ ಯುವಕ. ಈತ ರಿಪ್ಪನಪೇಟೆಯ ಸರ್ಕಾರಿ ಕಾಲೇಜಿನಲ್ಲಿ ಪದವಿ ತರಗತಿ ಓದುತ್ತಿದ್ದ. ಶಿವುಮೂರ್ತಿ ಕಳೆದ 7 ವರ್ಷಗಳಿಂದ ಭಟ್ಕಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಅವಳು ಬೇರೆಯವರನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಮೊನ್ನೆ ಆಕೆಯನ್ನು ನಂಜಪ್ಪ ನರ್ಸಿಂಗ್ ಕಾಲೇಜಿನಿಂದ ತನ್ನೂರಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಡೆತ್ನೋಟ್ ಬರೆದಿಟ್ಟು, ಕುತ್ತಿಗೆಯನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿ, ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.