ಶಿವಮೊಗ್ಗ: ರಾಜ್ಯದ ಪ್ರಸಿದ್ದ ಪಕ್ಷಿಧಾಮಗಳಲ್ಲಿ ಒಂದಾದ ಸೊರಬದ ಗುಡವಿ ಪಕ್ಷಿಧಾಮದಲ್ಲಿ ವಲಸೆ ಹಕ್ಕಿಗಳ ಸಾವಿನ ಕುರಿತ ರಹಸ್ಯ ಕೊನೆಗೂ ಬಯಲಾಗಿದೆ. ಅಕ್ಟೊಂಬರ್ ತಿಂಗಳಲ್ಲಿ ಗುಡವಿ ಪಕ್ಷಿಧಾಮದಲ್ಲಿ 30ಕ್ಕೂ ಅಧಿಕ ಪಕ್ಷಿಗಳ ಮೃತ ದೇಹಗಳು ಪತ್ತೆಯಾಗಿದ್ದವು. ಹಕ್ಕಿಗಳು ಕಲುಷಿತ ನೀರು ಸೇವನೆ, ಹಕ್ಕಿಜ್ವರ ಅಥವಾ ಇನ್ನ್ಯಾವುದಾದರೂ ಕಾರಣದಿಂದ ಸಾವನ್ನಪ್ಪಿವೆಯೇ ಎಂಬ ಆಂತಕದಲ್ಲಿದ್ದ ಅಧಿಕಾರಿಗಳು ವರದಿಗಾಗಿ ಕಾದಿದ್ದರು. ವರದಿ ಬಂದಿದ್ದು, ಅದರಲ್ಲಿ ಹಕ್ಕಿಗಳು ಮೇಲಿನ ಯಾವುದೇ ಕಾರಣದಿಂದ ಸತ್ತಿಲ್ಲ. ನಿರ್ಜಲಿಕರಣದಿಂದ ಸಾವನ್ನಪ್ಪಿವೆ ಎಂಬ ಅಂಶವನ್ನು ವರದಿ ಬಹಿರಂಗ ಪಡಿಸಿದೆ.
ಸಾವಿಗೆ ಕಲುಷಿತ ನೀರು ಹಾಗೂ ಹಕ್ಕಿಜ್ವರ ಕಾರಣ ಅಲ್ಲ: ಮೃತ ಪಟ್ಟ ಎಲ್ಲ ಹಕ್ಕಿಗಳ ಮೃತ ದೇಹವನ್ನು, ಶಿವಮೊಗ್ಗ ವನ್ಯಜೀವಿ ವಿಭಾಗ ಕಾರ್ಗಲ್ ವಲಯದ ಅಧಿಕಾರಿಗಳು ಮತ್ತು ಪಶು ವದ್ಯಕೀಯ ಕಾಲೇಜಿನ ಪ್ರೊಫೆಸರ್ಗಳನ್ನೊಳಗೊಂಡ ತಂಡ ಸ್ಥಳ ಪರಿಶೀಲನೆ ಮಾಡಿ, ಹಕ್ಕಿಗಳ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಪಕ್ಷಿಗಳ ದೇಹದ ಕೆಲ ಅಂಗಾಂಗಳನ್ನು ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜು ಹಾಗೂ ಬೆಂಗಳೂರು ಹೆಬ್ಬಾಳದ ವೈರಲಾಜಿ ಲ್ಯಾಬ್ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಈ ವರದಿಯಲ್ಲಿ ಹಕ್ಕಿಗಳು ಕಲುಷಿತ ನೀರು ಸೇವನೆಯಿಂದ ಅಥವಾ ಹಕ್ಕಿ ಜ್ವರದಿಂದ ಸಾವನ್ನಪ್ಪಿಲ್ಲ ಎಂದು ಸಾಬೀತಾಗಿದೆ. ಮೃತ ಪಕ್ಷಿಗಳು ನಿರ್ಜಲಿಕರಣದಿಂದ ಸಾವನ್ನಪ್ಪಿವೆ. ಅಲ್ಲದೇ ಪತ್ತೆಯಾದ ಒಂದೇರಡು ಪಕ್ಷಿಗಳ ಮೃತ ದೇಹದಲ್ಲಿ ಹೇನುಗಳು ಪತ್ತೆಯಾಗಿದ್ದವು. ಇದರಿಂದ ಹಕ್ಕಿಗಳು ಸಾವನ್ನಪ್ಪಿರಬಹುದು ಎಂದು ವರದಿ ಬಹಿರಂಗ ಪಡಿಸಿದೆ.
ಹವಮಾನ ವೈಪರಿತ್ಯ ಹಕ್ಕಿಗಳ ಸಾವಿಗೆ ಕಾರಣವಾಯ್ತಾ..?: ಗುಡವಿ ಪಕ್ಷಿಧಾಮಕ್ಕೆ ವಿದೇಶಿ ಹಕ್ಕಿಗಳು ವಲಸೆ ಬರುತ್ತವೆ. ಇಲ್ಲಿಗೆ ಬರುವ ಪಕ್ಷಿಗಳು ತಮ್ಮ ಸಂತಾನೋತ್ಪತ್ತಿ ಮಾಡಿಕೊಂಡು ತಮ್ಮ ಮರಿಗಳೊಂದಿಗೆ ವಾಪಸ್ ಆಗುತ್ತವೆ. ಆದರೆ ಈ ವರ್ಷ ಸರಿಯಾದ ಸಮಯಕ್ಕೆ ಮಳೆ ಆಗಿಲ್ಲ. ಗುಡವಿ ಪಕ್ಷಿಧಾಮವು ಬೇರೆ ಪ್ರದೇಶಗಳಿಕ್ಕಿಂತ ವಿಭಿನ್ನವಾಗಿದೆ. ಇಲ್ಲಿ ಕೆರೆ ಇದ್ದು ಇದಕ್ಕೆ ಹೊಂದಿಕೊಂಡು ಕುರುಚಲು ಕಾಡಿನ ಪ್ರದೇಶವಿದೆ. ಹೆಚ್ಚಾಗಿ ಹಕ್ಕಿಗಳು ಕಾಡಿನಲ್ಲಿ ಗೂಡು ಮಾಡಿಕೊಂಡು ಮೊಟ್ಟೆ ಇಟ್ಟ ವೇಳೆ ಈ ಕೆರೆಗೆ ಹೆಚ್ಚಾಗಿ ಆಗಮಿಸುತ್ತವೆ. ಕಾರಣ ಇಲ್ಲಿ ಸಿಗುವ ಮೀನುಗಳೇ ಅವುಗಳಿಗೆ ಆಹಾರ, ಜೊತೆಗೆ ಅಕ್ಕ ಪಕ್ಕದ ಗದ್ದೆಗಳಿಗೆ ಪಕ್ಕದ ಕೆರೆಗಳಿಗೆ ಹೋಗಿ ತಮ್ಮ ಆಹಾರವನ್ನು ಹುಡುಕಿಕೊಂಡು ಬರುತ್ತವೆ. ಆದರೆ, ಈ ಭಾರಿ ಮಳೆ ತಡವಾಗಿ ಬಂದು, ಕೆರೆ ನಿರೀಕ್ಷಿಸಿದ ಮಟ್ಟದಲ್ಲಿ ತುಂಬದ ಕಾರಣಕ್ಕೆ ಹಕ್ಕಿಗಳಿಗೆ ಆಹಾರ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗಲಿಲ್ಲ. ಇದರಿಂದ ಹಕ್ಕಿಗಳು ತಮ್ಮ ಮೂಲ ಸ್ಥಳಗಳಿಗೆ ತಡವಾಗಿ ವಾಪಸ್ ಆಗಿವೆ.
ಹಕ್ಕಿಗಳ ಸಾವು ಹಾಗೂ ವರದಿಯ ಕುರಿತು ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ, ಹಕ್ಕಿಗಳ ಸಾವು ನಮಗೆಲ್ಲ ಅಚ್ಚರಿಯನ್ನು ತಂದಿತ್ತು. ಈ ವಿಭಾಗವು ಕಾರ್ಗಲ್ಗೆ ಸೇರುತ್ತದೆ. ಕಾರ್ಗಲ್ ಎಸಿಎಫ್ ಯೋಗೀಶ್ ಅವರ ಜೊತೆ ನಾನು ಹಾಗೂ ಕೆಲ ವೈದ್ಯಾಧಿಕಾರಿಗಳ ತಂಡ ಗುಡವಿ ಪಕ್ಷಿಧಾಮಕ್ಕೆ ಭೇಟಿ ನೀಡಿದಾಗ ಅಲ್ಲಿ ಮರಿ ಹಕ್ಕಿಗಳ ಮೃತ ದೇಹ ಪತ್ತೆಯಾದವು. ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ, ಅನುಮಾನದ ಮೇರೆಗೆ ದೇಹದ ಕೆಲ ಅಂಗಾಂಗಗಳು ಜೊತೆಗೆ ಕೆರೆಯ ನೀರು, ಕೆರೆಗೆ ಬಂದು ಸೇರುವ ನೀರು ಹಾಗೂ ಪಕ್ಕದ ಕೆರೆಯ ನೀರಿನ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಪರೀಕ್ಷೆಗೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ನೀರು ಕಲುಷಿತವಾಗಿಲ್ಲ ಎಂದು ತಿಳಿದು ಬಂದಿದೆ.
ಹಕ್ಕಿಗಳ ಮರಿಗಳು ನೀರು ಆಹಾರ ಸಿಗದೇ ಸಾವನ್ನಪ್ಪಿವೆ. ಯಾವ ಮರಿಗಳು ತಾಯಿಯೊಂದಿಗೆ ಹಾರುವ ಸಾಮರ್ಥ್ಯ ಹೊಂದಿರುತ್ತವೆಯೋ ಅವು ಮಾತ್ರ ಬದುಕುಳಿಯುತ್ತವೆ. ಉಳಿದವುಗಳು ಗೂಡಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುತ್ತವೆ. ನಾವು ಸ್ಥಳ ಪರಿಶೀಲನೆಗೆ ಹೋದಾಗ ಕೆಲ ಹಕ್ಕಿಮರಿಗಳು ಕೆಳಗೆ ಬಿದ್ದಿದ್ದವು ಅವುಗಳಿಗೆ ಓಆರ್ಎಸ್ ಮಾದರಿಯ ನೀರನ್ನು ಕುಡಿಸುತ್ತಿದ್ದಂತಯೇ ಅವುಗಳು ಹಾರಲು ಪ್ರಾರಂಭಿಸಿದವು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಿಮಾನ ನಿಲ್ದಾಣ ಕಾಮಗಾರಿಗಾಗಿ ರಸ್ತೆ ಬಂದ್: ಗ್ರಾಮಸ್ಥರ ಪ್ರತಿಭಟನೆ