ಶಿವಮೊಗ್ಗ :ನನ್ನ ಸಾವಿಗೆ IAS ಹಿರಿಯ ಅಧಿಕಾರಿ ಕಾರಣ ಎಂದು ಜಿಲ್ಲಾಧಿಕಾರಿ ಕಚೇರಿಯ KLLADS ಶಾಖೆಯ ಉಸ್ತುವಾರಿ ನಿರ್ವಹಿಸುತ್ತಿದ್ದ ಗಿರಿರಾಜ್ ಎಂಬುವರು ಡೆತ್ ನೋಟ್ ಬರೆದು ಇಂದು ಬೆಳಗ್ಗೆಯಿಂದ ಕಾಣೆಯಾಗಿದ್ದಾರೆ.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗಿರಿರಾಜ್, ಇಂದು ಬೆಳಗ್ಗೆ 6 ಗಂಟೆಗೆ ತಾನು ವಾಸಿಸುವ ಸರ್ಕಾರಿ ನಿವಾಸದಿಂದ ಕಾಣೆಯಾಗಿದ್ದಾರೆ. ಗಿರಿರಾಜ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕರು, ಸಂಸದರು ಹಾಗೂ ಪರಿಷತ್ ಸದಸ್ಯರ ಅನುದಾನ ಹಂಚಿಕೆಯ ಕೆಲಸ ಮಾಡುತ್ತಿದ್ದರು.
ಇಲ್ಲಿ ಅನುದಾನ ಸರಿಯಾಗಿ ಬಾರದ ಕಾರಣ ಹಣ ಬಿಡುಗಡೆಗೆ ನನ್ನ ಬಳಿ ಕಿರಿಕಿರಿ ಉಂಟು ಮಾಡುತ್ತಿದ್ದರು ಎಂದು ತಮ್ಮ ಕಚೇರಿಯ ವಾಟ್ಸ್ಆ್ಯಪ್ ಗ್ರೋಪ್ ನಲ್ಲಿ ಡೆತ್ ನೋಟ್ ಸೆಂಡ್ ಮಾಡಿ ಕಾಣೆಯಾಗಿದ್ದಾರೆ.
ಗಿರಿರಾಜ್ ಬರೆದ ಪತ್ರದ ಸಾರಾಂಶ :ಮೇಲಾಧಿಕಾರಿಗಳು ನಮ್ಮಂತಹ ಕೆಳ ಹಂತದವರ ಮೇಲೆ ದಬ್ಬಾಳಿಕೆ ನಡೆಸಿ, ಕೆಲಸ ಮಾಡಿಸುತ್ತಾರೆ. ಅಧಿಕಾರಿಗಳು ಸಂಜೆ 4:30ಕ್ಕೆ ಮನೆಗೆ ಹೋಗುತ್ತಾರೆ. ಆದರೆ, ನಮಗೆ ರಾತ್ರಿ ಪೂರ್ತಿ ಕೆಲಸ ಮಾಡಿ ಎನ್ನುತ್ತಾರೆ.
2018-19ರಿಂದ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಿಲ್ಲ. ಬಂದ ಅರ್ಧ ಅನುದಾನದಲ್ಲಿ ಹಂಚಿಕೆ ಮಾಡುವುದು ಹೇಗೆ, ಡಿಸಿ ಅವರ ಪಿಡಿ ಖಾತೆಯ ಹಣ ಬಳಕೆ ಮಾಡಿ ಎಂದು ಹೇಳುತ್ತಿದ್ದರು.
ಈ ಬಗ್ಗೆ ನಾನು ಮೇಲಾಧಿಕಾರಿಗಳಿಗೆ ಅನುದಾನದ ಬಳಕೆ ಹೇಗೆ ಎಂದು ಪತ್ರ ಬರೆದಿದ್ದೆ. ಆದರೆ, ಈ ಬಗ್ಗೆ ಯಾವುದೇ ಉತ್ತರ ಬಂದಿರಲಿಲ್ಲ. ಇದರಿಂದ ಹಣದ ಬಳಕೆ ಹೇಗೆ ಎಂದು ತಿಳಿಯದಾಗಿತ್ತು. ಅಲ್ಲದೆ ಇದರಿಂದ ಕಡತ ಬಾಕಿ ಉಳಿಯುವಂತಾಗಿತ್ತು ಎಂದು ಬರೆದಿದ್ದಾರೆ. ನನಗೆ ಬರಬೇಕಾದ ಹಣವನ್ನು ನನ್ನ ಅಮ್ಮ, ನನ್ನ ಅಕ್ಕ, ನನ್ನ ಅಣ್ಣ, ನನ್ನ ಹೆಂಡತಿ ಹಾಗೂ ನನ್ನ ಮಗಳಿಗೆ ಐದು ಭಾಗವಾಗಿ ಹಂಚಿ ಎಂದು ತಿಳಿಸಿದ್ದಾರೆ.
ಸದ್ಯ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ. ಗಿರಿರಾಜ್ ಅವರು ಇಂದು ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಟು ಬೆಳಗ್ಗೆ 10 ಗಂಟೆಯಲ್ಲಿ ಭದ್ರಾವತಿಯ ಕಾರೆಹಳ್ಳಿ ಬಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಇದರಿಂದ ಗಿರಿರಾಜ್ ರನ್ನು ಈ ಭಾಗದ ಕಾಲುವೆಗಳಲ್ಲಿ ಹುಟುಕಾಟ ನಡೆಸಲಾಗುತ್ತಿದೆ. ಗಿರಿರಾಜ್ ಮಿಸ್ಸಿಂಗ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.