ಕರ್ನಾಟಕ

karnataka

ETV Bharat / state

ಫಸಲ್ ಭೀಮಾ ಯೋಜನೆಯಡಿ ಸಾಲ ಪಡೆಯದ ರೈತರ ಹೆಸರು ನೋಂದಾಯಿಸಲು ಕ್ರಮ ಕೈಗೊಳ್ಳಿ: ಡಿಸಿ ಸೂಚನೆ

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ವಿವಿಧ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆ ನಡೆಸಿದರು.

Shimoga
Shimoga

By

Published : Jul 2, 2020, 3:14 PM IST

ಶಿವಮೊಗ್ಗ:ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಈಗಾಗಲೇ ಸಾಲ ಪಡೆಯದ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೆ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ 504 ರೈತರು ಮಾತ್ರ ತಮ್ಮ ಹೆಸರು ನೋಂದಾಯಿಸಿದ್ದಾರೆ. ಇವರ ಪೈಕಿ 266 ಮಂದಿ ಸಾಲ ಪಡೆದಿರುವ ರೈತರು, 238 ಸಾಲ ಪಡೆಯದ ರೈತರಿದ್ದು, ಇದುವರೆಗೆ ಸಾಲ ಪಡೆದ ರೈತರು ಕಡ್ಡಾಯವಾಗಿ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದರು. ಆದರೆ ಈ ಬಾರಿ ಬೆಳೆ ವಿಮೆಯಿಂದ ತಮ್ಮನ್ನು ಕೈಬಿಡುವಂತೆ ಸಾಲ ಪಡೆದ ರೈತರು ಘೋಷಣಾ ಪತ್ರ ನೀಡಿದರೆ ಅವರನ್ನು ಕೈಬಿಡಲಾಗುವುದು. ಈ ಹಿನ್ನೆಲೆಯಲ್ಲಿ ಸಾಲ ಪಡೆಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಡಿ ನೋಂದಾಯಿಸಬೇಕು ಎಂದರು.

ಬೆಳೆ ವಿಮೆ ಸಂಸ್ಥೆಯು ತನ್ನ ಪ್ರತಿನಿಧಿಗಳನ್ನು ರೈತರ ಸಹಾಯಕ್ಕಾಗಿ ಪ್ರತಿ ತಾಲೂಕಿನಲ್ಲಿ ನಿಯೋಜಿಸಬೇಕು. ಬೆಳೆ ವಿಮೆ ನೋಂದಣಿ ಮತ್ತು ಪರಿಹಾರ ಇತ್ಯರ್ಥ ಕುರಿತಾಗಿ ಬ್ಯಾಂಕ್​​ಗಳು ಮತ್ತು ವಿಮಾ ಸಂಸ್ಥೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಬ್ಯಾಂಕ್​ಗಳಿಗೆ ಸೂಚನೆ:

ಕೊರೊನಾ ಸಂದರ್ಭದಲ್ಲಿ ಸರ್ಕಾರ ವಿವಿಧ ಫಲಾನುಭವಿಗಳಿಗೆ ನೀಡುವ ಸಹಾಯಧನದ ಮೊತ್ತವನ್ನು ಬ್ಯಾಂಕ್​​ಗಳು ಯಾವುದೇ ಕಾರಣಕ್ಕೂ ಅವರ ಸಾಲದ ಮೊತ್ತಕ್ಕೆ ಕಡಿತ ಮಾಡಬಾರದು. ಈ ಕುರಿತು ಯಾವುದೇ ದೂರುಗಳು ಬರಬಾರದು ಎಂದು ಜಿಲ್ಲಾಧಿಕಾರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಅಂತಿಮ ದಿನಾಂಕ:

ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಬೆಳೆಗಳಿಗೆ ನೋಂದಾಯಿಸಲು ಆಗಸ್ಟ್ 14 ಮತ್ತು ಮುಸುಕಿನ ಜೋಳ ಬೆಳೆ ವಿಮೆ ನೋಂದಾಯಿಸಲು ಜುಲೈ 31 ಅಂತಿಮ ದಿನಾಂಕವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಹೇಳಿದರು.

ಅವಧಿ ವಿಸ್ತರಣೆ:

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಶುಂಠಿ ಮತ್ತು ಕಾಳುಮೆಣಸು ಬೆಳೆಯುವ ರೈತರಿಗೆ ಮುಂಗಾರು ಅವಧಿಗೆ ಹೆಸರು ನೋಂದಾಯಿಸುವ ಅವಧಿಯನ್ನು ಜುಲೈ 10ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರನ್ನು ನೋಂದಾಯಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಯೋಜನೆ ಕುರಿತ ಪ್ರಚಾರ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ABOUT THE AUTHOR

...view details