ಶಿವಮೊಗ್ಗ:ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ - 2020 ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕಾಗಿರುವ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಹಾಗೂ ಕಟ್ಟುನಿಟ್ಟಿನ ಸದಾಚಾರ ಸಂಹಿತೆ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಎರಡು ಹಂತದಲ್ಲಿ ನಡೆಯಲಿದ್ದು, ಡಿ.22ರಂದು ಮೊದಲನೇ ಹಂತದಲ್ಲಿ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಹಾಗೂ ಡಿ. 27ರಂದು ಎರಡನೇ ಹಂತದಲ್ಲಿ ಸಾಗರ, ಶಿಕಾರಿಪುರ, ಸೊರಬ ಮತ್ತು ಹೊಸನಗರ ತಾಲೂಕುಗಳಲ್ಲಿ ನಡೆಯಲಿವೆ.
ಚುನಾವಣಾ ಪ್ರಕ್ರಿಯೆಗಳು ನಡೆಯುವ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮವಹಿಸುವ ಉದ್ದೇಶದಂತೆ ಅಧಿಕೃತ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳ ಪರವಾನಗಿದಾರರು ತಮ್ಮ ಆಯುಧಗಳು ಮತ್ತು ಮದ್ದು,ಗುಂಡುಗಳನ್ನು ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಜಮಾ ಮಾಡುವಂತೆ ಅವರು ಸೂಚಿಸಿದ್ದಾರೆ.
ಠೇವಣಿ ಇಡಲಾಗುವ ಶಸ್ತ್ರ/ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಠೇವಣಿ ಮಾಡಿದ ಬಗ್ಗೆ ಶಸ್ತ್ರ ಪರವಾನಗಿದಾರರು ಸೂಕ್ತ ರಸೀದಿಯನ್ನು ತಪ್ಪದೇ ಪಡೆದುಕೊಳ್ಳುವಂತೆ ಹಾಗೂ ಚುನಾವಣೆ ಮುಕ್ತಾಯಗೊಂಡ ನಂತರ ಆಯುಧಗಳನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗೆ ಎಂಪಿಎಂ, ವಿಐಎಸ್ಎಲ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಸಿಬ್ಬಂದಿ ಅಧಿಕೃತ ಪರವಾನಗಿ ಅಡಿಯಲ್ಲಿ ಹೊಂದಿರುವ ಆಯುಧಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಡಿಸಿ ಮನವಿ ಮಾಡಿದ್ದಾರೆ.