ಕರ್ನಾಟಕ

karnataka

ETV Bharat / state

ಮಕ್ಕಳ ರಕ್ಷಣೆಗೆ ನಿರಂತರ ನಿಗಾ ವಹಿಸಬೇಕು: ಅಪರ ಜಿಲ್ಲಾಧಿಕಾರಿ ಸೂಚನೆ - ಶಿವಮೊಗ್ಗ ಲೆಟೆಸ್ಟ್ ನ್ಯೂಸ್

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 4ನೇ ತ್ರೈಮಾಸಿಕ ಸಭೆ ನಡೆದಿದ್ದು, ಮಕ್ಕಳ ಮಾರಾಟ ಸೇರಿದಂತೆ ಮಕ್ಕಳ ಅಕ್ರಮ ಸಾಗಾಣಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ನಿರಂತರ ನಿಗಾ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಸೂಚನೆ ನೀಡಿದರು.

Meeting on safety of children matter
Meeting on safety of children matter

By

Published : Jun 11, 2020, 10:33 PM IST

ಶಿವಮೊಗ್ಗ: ಮಕ್ಕಳ ಮಾರಾಟ ಸೇರಿದಂತೆ ಮಕ್ಕಳ ಅಕ್ರಮ ಸಾಗಾಣಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ನಿರಂತರ ನಿಗಾ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಸೂಚನೆ ನೀಡಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 4ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾರಾಟ ಪ್ರಕರಣಗಳು ಸೇರಿದಂತೆ ಎಲ್ಲಾ ರೀತಿಯ ಶೋಷಣೆಗಳನ್ನು ತಡೆಗಟ್ಟುವುದು ಎಲ್ಲಾ ಇಲಾಖೆಗಳ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಹಾಗಾಗಿ, ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಸಾರ್ವಜನಿಕರು ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯಗಳ ಬಗ್ಗೆ ಮಾಹಿತಿ ಅಥವಾ ದೂರು ನೀಡಬಹುದಾಗಿದೆ. ಈ ಸಂಖ್ಯೆಯನ್ನು ಜಿಲ್ಲೆಯಾದ್ಯಂತ ಹೆಚ್ಚು ಪ್ರಚುರಪಡಿಸಬೇಕು. ಎಲ್ಲಾ ಶಾಲೆಗಳ ಗೋಡೆಗಳ ಮೇಲೆ ಸ್ಪಷ್ಟವಾಗಿ ಕಾಣುವಂತೆ ಈ ಸಂಖ್ಯೆಯನ್ನು ಬರೆಯಬೇಕು ಎಂದು ಸೂಚನೆ ನೀಡಿದರು.

ಸಹಾಯವಾಣಿ: ಮಕ್ಕಳ ಸಹಾಯವಾಣಿಗೆ ಕಳೆದ ಐದು ತಿಂಗಳಲ್ಲಿ ಒಟ್ಟು 337 ಕರೆಗಳು ಬಂದಿವೆ. ಇದರಲ್ಲಿ 41ಬಾಲ್ಯ ವಿವಾಹ, 17 ಲೈಂಗಿಕ ದೌರ್ಜನ್ಯ, 23 ಬಾಲ ಕಾರ್ಮಿಕರ ವಿಚಾರ, 70 ಮಾನಸಿಕ ಹಾಗೂ ದೈಹಿಕ ಹಿಂಸೆ, 74 ಶಾಲೆಯಲ್ಲಿ ಗೈರು ಹಾಜರಾಗಿರುವ ಕುರಿತು ಕರೆಗಳನ್ನು ಸ್ವೀಕರಿಸಲಾಗಿದೆ. ಅಲ್ಲದೇ, ಪ್ರತಿಯೊಂದು ಕರೆಗಳನ್ನು ತಕ್ಷಣ ಪರಿಶೀಲಿಸಿ ಕ್ರಮ ಜರುಗಿಸಲಾಗಿದೆ. ಪೊಲೀಸರ ಸಹಕಾರದೊಂದಿಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಪಾಲನಾ ಸಂಸ್ಥೆಗಳ ಪರಿಶೀಲನೆ: ಜಿಲ್ಲೆಯಲ್ಲಿ 37 ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಪ್ರಸ್ತುತ 174 ಮಕ್ಕಳು ಆಶ್ರಯ ಪಡೆದಿದ್ದಾರೆ. ಕೋವಿಡ್ ಅವಧಿಯಲ್ಲಿ 1186 ಮಕ್ಕಳನ್ನು ಅವರ ಪಾಲಕರ ಬಳಿ ಕಳುಹಿಸಲಾಗಿದೆ. ಈ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಮೂಲಭೂತ ಸೌಕರ್ಯಗಳು, ನೀಡುತ್ತಿರುವ ಸೌಲಭ್ಯಗಳ ಕುರಿತು ಆಗಾಗ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.

ಬಾಲ್ಯವಿವಾಹ ಪ್ರಕರಣಗಳು:ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ, 2 ಬಾಲ್ಯವಿವಾಹ ಪ್ರಕರಣಗಳು ನಡೆದಿವೆ. ಇನ್ನುಳಿದ 18 ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆಯಲಾಗಿದೆ. ಬಾಲ್ಯವಿವಾಹ ತಡೆದ 3 ಮಕ್ಕಳಿಗೆ ತಾತ್ಕಾಲಿಕ ಆಶ್ರಯ ನೀಡಿ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಬಳಿಕ ಪೋಷಕರ ಬಳಿ ಕಳುಹಿಸಲಾಯಿತು. ಇನ್ನುಳಿದ ಪ್ರಕರಣಗಳಲ್ಲಿ ಆಪ್ತ ಸಮಾಲೋಚನೆ ನಡೆಸಿದ ಬಳಿಕ, ಮಕ್ಕಳ ಪೋಷಕರ ವಶಕ್ಕೆ ನೀಡಲಾಗಿದೆ. ಈ ಎಲ್ಲಾ ಪ್ರಕರಣಗಳನ್ನು ನಿರಂತರವಾಗಿ ನಿಗಾವಹಿಸಬೇಕು ಎಂದು ತಿಳಿಸಿದರು.

ABOUT THE AUTHOR

...view details