ಶಿವಮೊಗ್ಗ: ಬಾಲ್ಯ ವಿವಾಹವನ್ನು ಸಮರ್ಪಕವಾಗಿ ತಡೆಯಲು ಗ್ರಾಮ ಮಟ್ಟದಲ್ಲಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಮೇಲೆ ನಿರಂತರವಾಗಿ ನಿಗಾ ಇರಿಸುವ ಅಗತ್ಯವಿದೆ. ಏಪ್ರಿಲ್‌ನಿಂದ ಸೆಪ್ಟಂಬರ್ ಅಂತ್ಯದವರೆಗೆ ಒಟ್ಟು 12 ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು, ಎಫ್‍ಐಆರ್ ದಾಖಲಿಸಲಾಗಿದೆ. ಈ ಅವಧಿಯಲ್ಲಿ 48 ಬಾಲ್ಯ ವಿವಾಹ ಪ್ರಕರಣಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ. ಗ್ರಾಮ ಮಟ್ಟದಲ್ಲಿ ಪಿಡಿಒಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಪೊಲೀಸರು ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ 26 ಪ್ರಕರಣಗಳು ದಾಖಲಾಗಿವೆ. 2012 ರ ಮಾರ್ಚ್‍ನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 684 ಪ್ರಕರಣಗಳು ವರದಿಯಾಗಿದ್ದು, 270 ಪ್ರಕರಣಗಳು ಖುಲಾಸೆಗೊಂಡು 26 ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಿದೆ. ಇನ್ನೂ 344 ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಬಾಕಿಯಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ವೈದ್ಯಕೀಯ ಹಾಗೂ ಇತರೆ ಅಗತ್ಯ ವೆಚ್ಚಕ್ಕಾಗಿ ಗರಿಷ್ಠ 10 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜೆ.ಜೆ.ಸುರೇಶ್ ಮಾಹಿತಿ ನೀಡಿದರು.