ಶಿವಮೊಗ್ಗ:ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆ ಕೃತಕ ಅಭಾವ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಪರವಾನಿಗೆ ಆದೇಶ ತಿದ್ದುಪಡಿ-2019ನ್ನು ಜಾರಿಗೊಳಿಸಿದೆ. ಜಿಲ್ಲೆಯ ಈರುಳ್ಳಿ ಸಗಟು ಮತ್ತು ಚಿಲ್ಲರೆ ವರ್ತಕರು ಕೂಡಲೇ ಪರವಾನಿಗೆ ಪಡೆಯುವಂತೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಸೂಚಿಸಿದ್ದಾರೆ.
ಈರುಳ್ಳಿ ವರ್ತಕರಿಗೆ ಅಗತ್ಯ ವಸ್ತುಗಳ ಪರವಾನಿಗೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ..
ಮಾರುಕಟ್ಟೆಯಲ್ಲಿ ಈರುಳ್ಳಿಯ ಅಭಾವ ದಿನೇದಿನೆ ಹೆಚ್ಚುತ್ತಿದೆ. ಈರುಳ್ಳಿಯ ಕೃತಕ ಅಭಾವ ತಪ್ಪಿಸಲು ಈರುಳ್ಳಿ ವರ್ತಕರಿಗೆ ಅಗತ್ಯ ವಸ್ತುಗಳ ಪರವಾನಿಗೆ ಪಡೆಯುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ
ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಇದರ ಸದುಪಯೋಗ ಪಡೆಯುತ್ತಿರುವ ಕೆಲ ದಾಸ್ತಾನುದಾರರು ಈರುಳ್ಳಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವವನ್ನು ಸೃಷ್ಠಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.
ಅಲ್ಲದೆ, ಅನಧಿಕೃತವಾಗಿ ದಾಸ್ತಾನು ಮಾಡಿ ಕೃತಕ ಅಭಾವವನ್ನು ಸೃಷ್ಠಿಸಲು ಕಾರಣರಾದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.