ಶಿವಮೊಗ್ಗ:ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ಕಾಲೇಜುಗಳನ್ನು ಎಂದಿನಂತೆ ಮುಂದುವರೆಸುವುದು ಉತ್ತಮ ಎಂದು ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕೋವಿಡ್ ತಜ್ಞರ ಸಭೆ ನಡೆಸಲಾಯಿತು. ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದರೆ ಗಾಬರಿಗೊಳ್ಳುವ ಅಗತ್ಯವಿಲ್ಲ. ಮೂರನೇ ಅಲೆಯಲ್ಲಿ ಕೋವಿಡ್ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕೋವಿಡ್ ಪಾಸಿಟಿವ್ ಮಕ್ಕಳನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿಸಿ ಶಾಲಾ ಕಾಲೇಜುಗಳನ್ನು ನಡೆಸುವುದು ಉತ್ತಮ. ಪ್ರತಿ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ರೋಗ ಲಕ್ಷಣವಿರುವ ಮಕ್ಕಳನ್ನು ಮನೆಗೆ ಕಳುಹಿಸಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಅಂಕಿ-ಅಂಶಗಳನ್ನು ಗಮನಿಸಿದರೆ ಕೋವಿಡ್ ಮೂರನೇ ಅಲೆಯಲ್ಲಿ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿರುವವರ ಪ್ರಮಾಣ ಅತಿ ಕಡಿಮೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ 63 ಜನರ ಪೈಕಿ ಇಬ್ಬರಿಗೆ ಮಾತ್ರ ಆಕ್ಸಿಜನ್ ಒದಗಿಸುವ ಅಗತ್ಯ ಬಿದ್ದಿದೆ. ಈಗಾಗಲೇ ಬೇರೆ ರೋಗಗಳನ್ನು ಹೊಂದಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಬಿದ್ದಿದೆ. ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದರೆ ಬಹುತೇಕ ಮಂದಿಯನ್ನು ಆಸ್ಪತ್ರೆಯ ಬದಲಿಗೆ ಅಲ್ಲಿಗೆ ಸೇರಿಸಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದರು.
ಲಸಿಕೆ ಪ್ರತಿಯೊಬ್ಬರೂ ಹಾಕಬೇಕು: ಮೂರನೇ ಅಲೆಯಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಅಂಕಿಅಂಶಗಳನ್ನು ಗಮನಿಸಿದಾಗ, ಎರಡು ಲಸಿಕೆ ಹಾಕಿಸಿದವರ ಮೇಲೆ ಕೋವಿಡ್ ಸಾಮಾನ್ಯ ಪ್ರಭಾವ ಬೀರಿದ್ದು ಬಹುತೇಕ ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.