ಶಿವಮೊಗ್ಗ:ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ದಸರಾ ಹಬ್ಬವನ್ನು ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ದಸರಾ ಆಚರಣೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಎಲ್ಲೆಡೆ ತೀವ್ರಗತಿಯಲ್ಲಿ ಹರಡುತ್ತಿದೆ. ನಾವು ಈಗಾಗಲೇ ಹಲವಾರು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಹೆಚ್ಚು ಜನರನ್ನು ಸೇರಿಸಿ ಕೊರೊನಾ ಹರಡಲು ನಾವೇ ಆಸ್ಪದ ಕೊಡಬಾರದು. ಹೀಗಾಗಿ ಮಹಾನಗರ ಪಾಲಿಕೆಯಲ್ಲಿ ತೀರ್ಮಾನಿಸಿರುವಂತೆ ಅತ್ಯಂತ ಸರಳವಾಗಿ ದಸರಾ ಆಚರಿಸುವುದು ಸೂಕ್ತವಾಗಿದೆ ಎಂದರು.
ಮುಜರಾಯಿ ದೇವಾಲಯಗಳಿಗೆ ಮಾತ್ರ ಅವಕಾಶ:
ನಗರದ ಚಂದ್ರಶೇಖರ ಆಜಾದ್ ಮೈದಾನದಲ್ಲಿ ನಡೆಯುವ ಬನ್ನಿ ಕಡಿಯುವ ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಎಲ್ಲಾ ದೇವಾಲಯಗಳ ದೇವರನ್ನು ತರಲು ಈ ಬಾರಿ ಅವಕಾಶವಿಲ್ಲ. ಶಿವಮೊಗ್ಗ ನಗರದ ಮುಜರಾಯಿ ಇಲಾಖೆ ದೇವಸ್ಥಾನಗಳಿಂದ ದೇವರನ್ನು ತರಬಹುದಾಗಿದೆ. ಖಾಸಗಿ ದೇವಾಲಯಗಳ ದೇವರನ್ನು ತರಲು ಅವಕಾಶವಿಲ್ಲ. ದೇವರನ್ನು ತರುವ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲ. ಸಾಂಕೇತಿಕವಾಗಿ ಬನ್ನಿ ಮಂಟಪಕ್ಕೆ ದೇವರುಗಳನ್ನು ತಂದು ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುವುದು ಎಂದರು.
ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಹಾಗೂ ಮನೆ ಸಮೀಪದ ದೇವಾಲಯಗಳಲ್ಲಿಯೇ ದಸರಾ ಆಚರಿಸಬೇಕು. ಬನ್ನಿಯನ್ನು ಶ್ರದ್ಧಾಪೂರ್ವಕವಾಗಿ ದೇವರಿಗೆ ಸಮರ್ಪಿಸಬಹುದಾಗಿದೆ. ತಾನು ಸಹ ಈ ಬಾರಿ ಬನ್ನಿ ಕಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಗರಿಷ್ಠ ಅಲಂಕಾರ:ದಸರಾ ಸಂದರ್ಭದಲ್ಲಿ ಶಿವಮೊಗ್ಗ ನಗರಾದ್ಯಂತ ಪ್ರತಿ ವರ್ಷದಂತೆ ಗರಿಷ್ಠ ಅಲಂಕಾರ ಮಾಡಬೇಕು. ಚಂದ್ರಶೇಖರ ಆಜಾದ್ ಮೈದಾನದಲ್ಲಿ ನಡೆಯುವ ಬನ್ನಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸದೇ ಸಹಕರಿಸಬೇಕು. ದಸರಾ ಆಚರಣೆಯ ಎಲ್ಲಾ ಕಾರ್ಯಕ್ರಮಗಳನ್ನು ಟಿವಿ, ಆನ್ಲೈನ್ ಮೂಲಕ ನೇರ ಪ್ರಸಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಜನರು ಮನೆಯಲ್ಲಿಯೇ ಕುಳಿತು ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಪೊಲೀಸ್ ವರಿಷ್ಟಾಧಿಕಾರಿ ಕೆ. ಎಂ. ಶಾಂತರಾಜು ಸಭೆಯಲ್ಲಿ ಉಪಸ್ಥಿತರಿದ್ದರು.