ಕರ್ನಾಟಕ

karnataka

ETV Bharat / state

ಭದ್ರಾ ಜಲಾಶಯಕ್ಕೆ ಅಪಾಯ ತಂದಿಟ್ಟಿತೆ ಕಳಪೆ ಕಾಮಗಾರಿ? - Opposition to poor work

ಕಾಮಗಾರಿ ನಡೆಸಿ ಎರಡನೇ ವರ್ಷದಲ್ಲಿ ಭದ್ರಾ ಜಲಾಶಯದ ಸ್ಟಿಲ್ಲಿಂಗ್ ಬೇಸಿನ್ ಕಿತ್ತು ಹೋಗಿ, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅನಾಹುತ ಸಂಭವಿಸುವ ಮೊದಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

Dangerous  to Bhadra Reservoir
ಭದ್ರಾ ಜಲಾಶಯಕ್ಕೆ ಅಪಾಯ

By

Published : Jun 27, 2021, 12:07 PM IST

ಶಿವಮೊಗ್ಗ : ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ಕೈಗೊಂಡಿದ್ದ ದುರಸ್ತಿ ಕಾಮಗಾರಿ ಕೇವಲ ಎರಡೇ ವರ್ಷದಲ್ಲಿ ಕಿತ್ತು ಹೋಗಿದ್ದು, ಜಲಾಶಯಕ್ಕೆ ಅಪಾಯ ಎದುರಾಗಿದೆ ಎಂಬ ಮಾತುಗಳು ಈ ಭಾಗದಲ್ಲಿ ಕೇಳಿಬರುತ್ತಿವೆ. ಇದರಿಂದ ಜಲಾಶಯದ ಕೆಳ ಭಾಗದಲ್ಲಿರುವ ನದಿಪಾತ್ರದ ಜನರಿಗೆ ಆತಂಕ ಉಂಟಾಗಿದೆ. ಜೊತೆಗೆ ರೈತರ ಆಕ್ರೋಶಕ್ಕೂ ಕಾರಣವಾಗಿದೆ.

ರಾಜ್ಯ ಸರ್ಕಾರವು ವಿಶ್ವಬ್ಯಾಂಕ್ ನೆರವಿನೊಂದಿಗೆ 2016-17ರಲ್ಲಿ ರಾಜ್ಯದ ಎಲ್ಲಾ ಜಲಾಶಯಗಳ ದುರಸ್ತಿಗೆ ಕ್ರಮಕೈಗೊಂಡಿತ್ತು. ಇದೇ ಯೊಜನೆಯಲ್ಲಿ ಈ ಜಲಾಶಯದಲ್ಲಿ 7 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಜಲಾಶಯದ ಕ್ರಸ್ಟ್ ಗೇಟ್​ಗಳಿಂದ ನದಿಗೆ ನೀರು ಧುಮುಕುವ ಜಾಗದ ಕೆಳಗೆ ಸ್ಟಿಲ್ಲಿಂಗ್ ಬೇಸಿನ್ ಕಾಮಗಾರಿಯನ್ನು ನಡೆಸಲಾಗಿತ್ತು.

ಹಿಂದೆ ಮಾಡಿದ್ದ ಸ್ಟಿಲ್ಲಿಂಗ್ ಬೇಸಿನ್ ಗಟ್ಟಿಯಾಗಿದ್ದರೂ, ಅದನ್ನು ಒಡೆದು ಹಾಕಲಾಗಿತ್ತು. ಗಟ್ಟಿಮುಟ್ಟಾಗಿದ್ದ ಸ್ಟಿಲ್ಲಿಂಗ್ ಬೇಸಿನ್ ಗಾರೆ ಒಡೆಯುವಾಗಲೇ ವಿರೋಧ ವ್ಯಕ್ತವಾಗಿತ್ತು. ಆದರೂ ಯಂತ್ರಗಳನ್ನು ಬಳಸಿ ಸತತ ಒಂದು ತಿಂಗಳು‌ ಕಷ್ಟಪಟ್ಟು ಮೆಲ್ಭಾಗದ ಸ್ವಲ್ಪ ಗಾರೆಯನ್ನು ಒಡೆದು ಹೊಸದಾಗಿ ಕಬ್ಬಿಣ ಹಾಗೂ ಸಿಮೆಂಟ್ ಬಳಸಿ ಕಾಂಕ್ರೀಟ್ ಹಾಕಲಾಗಿತ್ತು. ಆದರೆ, ಹೀಗೆ ಹಾಕಿದ ಕಾಂಕ್ರೀಟ್ ಕೇವಲ ಎರಡೇ ವರ್ಷದಲ್ಲಿ ಕಿತ್ತು ಹೋಗಿದೆ. ಇದರಿಂದ ಜಲಾಶಯಕ್ಕೆ ಅಪಾಯ ಎದುರಾಗಿದೆ.

ಭದ್ರಾ ಜಲಾಶಯದ ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು

ಓದಿ : ಭದ್ರಾ ಜಲಾಶಯ ದುರಸ್ತಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ : ರೈತರಿಂದ ಡ್ಯಾಂ ಬಳಿ ಪ್ರತಿಭಟನೆ

ಜಲಾಶಯದಿಂದ‌ ನೀರನ್ನು ನದಿಗೆ ಬಿಟ್ಟಾಗ ಅದರ ರಭಸವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಹೀಗೆ, ಧುಮುಕುವ ನೀರಿನ ವೇಗವನ್ನು ತಗ್ಗಿಸಿ ನದಿಗೆ ನೀರು ಹರಿಸುವ ಉದ್ದೇಶದಿಂದ ನೀರು ಧುಮುಕುವ ಕೆಳಭಾಗದಲ್ಲಿ ಸ್ಟಿಲ್ಲಿಂಗ್ ಬೇಸಿನ್ ನಿರ್ಮಾಣವಾಗುತ್ತದೆ. ಧುಮುಕುವ ನೀರು ಸ್ಟಿಲ್ಲಿಂಗ್ ಬೇಸಿನ್​ಗೆ ಬಿದ್ದಾಗ ನೀರಿನ ರಭಸ ಶೂನ್ಯಕ್ಕೆ ಬಂದು‌ ನದಿಯಲ್ಲಿ‌ ಶಾಂತವಾಗಿ ಹರಿಯುತ್ತದೆ. ಅಗ ನದಿದಂಡೆ ಕೊಚ್ಚಿಕೊಂಡು ಹೋಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಕಿತ್ತು ಹೋಗಿರುವ ಜಲಾಶಯದ ಸ್ಟಿಲ್ಲಿಂಗ್ ಬೇಸಿನ್ ಗಾರೆ

ಆದರೆ, ಇದೀಗ ಭದ್ರಾ ಜಲಾಶಯದ ಸ್ಟಿಲ್ಲಿಂಗ್ ಬೇಸಿನ್ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದೆ. ಇದರಿಂದ ಜಲಾಶಯದ ಕೆಳಭಾಗ ಕೊಚ್ಚಿಕೊಂಡು ಹೋಗುವ ಅಪಾಯ ಎದುರಾಗಿದೆ. ಜಲಾಶಯದ ಪಕ್ಕದ ಜಾಗವೇ ಕೊಚ್ಚಿಕೊಂಡು ಹೋದರೆ ಜಲಾಶಯಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಒಂದು ವೇಳೆ ಜಲಾಶಯಕ್ಕೆ ಅಪಾಯ ಉಂಟಾದಲ್ಲಿ ನೀರು ಏಕಾಏಕಿ ನದಿಗೆ ನುಗ್ಗಿ ಭೀಕರ ಪ್ರವಾಹ ಸಂಭವಿಸಿ ನದಿಪಾತ್ರದ ಸಾವಿರಾರು ಮಂದಿ ಜೀವ ಕಳೆದುಕೊಳ್ಳುವುದರಲ್ಲಿ ಅನುಮಾವೇ ಇಲ್ಲ‌.

ಯಾವುದೇ ಕಾಮಗಾರಿಗಳನ್ನು ಕಳಪೆ ಮಾಡಿದರೆ, ಅದನ್ನು ಸರಿಮಾಡಲು ಅವಕಾಶವಿರುತ್ತದೆ. ಆದರೆ, ಜಲಾಶಯದ ಕಾಮಗಾರಿಗಳನ್ನೇ ಕಳಪೆ ಮಾಡಿದರೆ ಜಲಾಶಯಗಳನ್ನು ಕಳೆದುಕೊಳ್ಳುವ ಜೊತೆಗೆ ಸಾವಿರಾರು ಜನರ ಜೀವ ಬಲಿತೆಗೆದುಕೊಳ್ಳಬೇಕಾಗುತ್ತದೆ. ಕಳಪೆ ಕಾಮಗಾರಿ‌ ನಡೆಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಜೊತೆಗೆ, ಕೂಡಲೇ ಭದ್ರಾ ಜಲಾಶಯದ ಸ್ಟಿಲ್ಲಿಂಗ್ ಬೇಸಿನ್ ಸರಿಪಡಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ABOUT THE AUTHOR

...view details