‘ನಿಸಾರ್ ಅಹಮದ್ ಅವರಿಗೆ ಶಿವಮೊಗ್ಗ ಜಿಲ್ಲೆಯೇ ತವರು ಮನೆಯಾಗಿತ್ತು’ - ಪ್ರೊ.ಕೆ.ಎಸ್.ನಿಸಾರ್ ಅಹಮದ್
ಪ್ರತಿದಿನ ಮೀನಾಕ್ಷಿ ಭವನದಿಂದ ಸಹ್ಯಾದ್ರಿ ಕಾಲೇಜಿಗೆ ತೆರಳುವಾಗ ತುಂಗಾ ನದಿ ಹಳೆ ಸೇತುವೆ ದಾಟಿ ಹೋಗುತ್ತಿದ್ದ ಅವರು, ಹಲವು ಕವಿತೆ, ಸಾಹಿತ್ಯದ ಚರ್ಚೆಯ ವೇಳೆ ಈ ಸೇತುವೆಯನ್ನು ಅವರು ಪ್ರಸ್ತಾಪಿಸುತ್ತಿದ್ದರು.
ನಿಸಾರ್ ಅಹಮದ್
ಶಿವಮೊಗ್ಗ :ಪ್ರೊ.ಕೆ ಎಸ್ ನಿಸಾರ್ ಅಹಮದ್ ಅವರ ಹುಟ್ಟೂರು ಬೆಂಗಳೂರು. ಆದರೆ, ಅನೇಕ ಮಂದಿ ಅವರನ್ನು ಶಿವಮೊಗ್ಗದವರು ಎಂದು ಭಾವಿಸಿದ್ದಾರೆ. ‘ನಿಸಾರ್ ಅಹಮದ್ ಅವರಿಗೆ ಶಿವಮೊಗ್ಗ ಜಿಲ್ಲೆಯೇ ತವರು ಮನೆಯಾಗಿತ್ತು’ ಎಂದು ಸ್ಮರಿಸಿಕೊಳ್ಳುತ್ತಾರೆ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್.
ಮೀನಾಕ್ಷಿ ಭವನದ ಮಸಾಲೆ ದೋಸೆ ಜುವೆಲ್ ರಾಕ್ ರೂಮ್:ಮೀನಾಕ್ಷಿ ಭವನದ ಮಸಾಲೆ ದೋಸೆ ಅಂದರೆ ನಿಸಾರ್ ಅಹಮದ್ರಿಗೆ ಬಲು ಇಷ್ಟ. ಶಿವಮೊಗ್ಗಕ್ಕೆ ಬಂದಾಗಲೆಲ್ಲ, ಅವಕಾಶ ಸಿಕ್ಕರೆ ಮಸಾಲೆ ದೋಸೆ ಸವಿಯುತ್ತಿದ್ದರು. ಜೊತೆಗೆ ನಗರದ ಜುವೆಲ್ ರಾಕ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡುತ್ತಿದ್ದುದು ಖಾಯಂ ಆಗಿತ್ತು.
ಹಳೆ ಸೇತುವೆ ಮೇಲಿನ ಬಲು ಪ್ರೀತಿ :ಪ್ರತಿದಿನ ಮೀನಾಕ್ಷಿ ಭವನದಿಂದ ಸಹ್ಯಾದ್ರಿ ಕಾಲೇಜಿಗೆ ತೆರಳುವಾಗ ತುಂಗಾ ನದಿ ಹಳೆ ಸೇತುವೆ ದಾಟಿ ಹೋಗುತ್ತಿದ್ದ ಅವರು, ಹಲವು ಕವಿತೆ, ಸಾಹಿತ್ಯದ ಚರ್ಚೆಯ ವೇಳೆ ಈ ಸೇತುವೆಯನ್ನು ಅವರು ಪ್ರಸ್ತಾಪಿಸುತ್ತಿದ್ದರು. ಹಲವು ಸಂದರ್ಶನ, ಅನೇಕ ಗೋಷ್ಠಿಗಳಲ್ಲಿ ಶಿವಮೊಗ್ಗದ ನೆನಪಿನ ಬುತ್ತಿ ಬಿಚ್ಚಿದಾಗ ನೂರು ವರ್ಷದ ಹಳೆಯ ಸೇತುವೆಯನ್ನು ಸ್ಮರಿಸುತ್ತಿದ್ದರು.
73ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ :2006ರ ಡಿಸೆಂಬರ್ನಲ್ಲಿ ಜಿಲ್ಲೆಯಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೊ. ನಿಸಾರ್ ಅಹಮದ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜಿಲ್ಲೆಯಲ್ಲಿ ನಡೆಯುವ ಸಮ್ಮೇಳನ ಅಂದಾಕ್ಷಣ ಪುಳಕಿತರಾದರು. ಆಗ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದದ್ದು ಉಪ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ‘ಯಡಿಯೂರಪ್ಪ ಅವರೊಂದಿಗೆ ನಾವೆಲ್ಲ ಪ್ರೊ.ನಿಸಾರ್ ಅಹಮದ್ ಅವರ ಮನೆಗೆ ತೆರಳಿ ಆಹ್ವಾನ ನೀಡಿದ್ದೆವು. ಸಮ್ಮೇಳನ ಅಧ್ಯಕ್ಷರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಂತೆ ಎಂಆರ್ಎಸ್ ಸರ್ಕಲ್‍ನಿಂದ ಅವರಿಗೆ ಮೆರವಣಿಗೆ ಮಾಡಲಾಗಿತ್ತು’ ಎಂದು ಸ್ಮರಿಸಿಕೊಳ್ಳುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಆಗಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್.
ಪ್ರಾಣ ಹೋದರೂ ಚಿಂತೆಯಿಲ್ಲ:ರಾಜ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಿಸಾರ್ ಅಹಮದ್, ಒಂದು ವಾರ ಜ್ಯುವೆಲ್ ರಾಕ್ ಹೋಟೆಲ್‍ನಲ್ಲಿ ಕುಟುಂಬ ಸಹಿತ ಉಳಿದಿದ್ದರು. ಸಮ್ಮೇಳನದಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ‘ಸನ್ಮಾನದ ಸಂದರ್ಭದಲ್ಲಿ ನನ್ನ ಬದುಕು ಪಾವನವಾಯ್ತು. ನನ್ನ ಗುರು ಕುವೆಂಪು ಅವರು ಓಡಾಡಿದ ನೆಲದಲ್ಲಿ ನನಗೆ ಇಂತಹ ಅವಕಾಶ ಸಿಕ್ಕಿದೆ. ಇವತ್ತೇ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಅಂತಾ ಅಂದಿದ್ರು’ ಎಂದು ಡಿ.ಮಂಜುನಾಥ್ ನೆನಪು ಮಾಡಿಕೊಳ್ಳುತ್ತಾರೆ.
ಬೆಂಗಳೂರಿನಲ್ಲಿ ಹುಟ್ಟಿತು ಜೋಗದ ಸಿರಿ ಬೆಳಕಿನಲ್ಲಿ:‘ಜೋಗದ ಸಿರಿ ಬೆಳಕಿನಲ್ಲಿ..’ ಅಂದಾಕ್ಷಣ ಎಲ್ಲರಿಗೂ ಪ್ರೊ.ನಿಸಾರ್ ಅಹಮದ್ ಅವರ ನೆನಪಾಗುತ್ತದೆ. ಶಿವಮೊಗ್ಗದ ಪ್ರಕೃತಿ ಸೌಂದರ್ಯ, ಇತಿಹಾಸ, ಸಾಮಾಜಿಕ, ಸಾಂಕ್ಕೃತಿಕ ಜೀವನ, ರಾಜ್ಯದ ವೈವಿಧ್ಯತೆಯನ್ನು ಒಳಗೊಂಡಿರುವ ಕವನ ಅದು. ಶಿವಮೊಗ್ಗದ ವರ್ಣನೆ ಮಾಡಿದ್ದ ಈ ಕವಿತೆ ಸಿದ್ಧವಾಗಿದ್ದು ಬೆಂಗಳೂರಿನಲ್ಲಿ. ಇದನ್ನು ಹಲವು ಸಂದರ್ಶನಗಳಲ್ಲಿ ನಿಸಾರ್ ಹೇಳಿಕೊಂಡಿದ್ದಾರೆ. ಆಕಾಶವಾಣಿಗಾಗಿ ರಚಿಸಿದ ಕಾವ್ಯ ಅದು. ಮೈಸೂರು ಅನಂತಸ್ವಾಮಿ ಅವರು ಒಮ್ಮೆ ಜಿಲ್ಲೆಗೆ ಬಂದಾಗ ಈ ಕಾವ್ಯವನ್ನು ರೇವತಿ ರಾಗದಲ್ಲಿ ಹಾಡಿದ್ದರು. ಆಗ ಜೊತೆಗಿದ್ದವರೆಲ್ಲ ಖುಷಿಪಟ್ಟು ಮತ್ತೆ ಮತ್ತೆ ಹಾಡಿಸಿದ್ದರಂತೆ. ಆಗಿನಿಂದ ನಿತ್ಯೋತ್ಸವ ಕವಿತೆ ಹೆಚ್ಚು ಜನಮನ್ನಣೆ ಪಡೆಯಿತು ಅಂತಾ ನಿಸಾರ್ ಅವರು ಪ್ರಸ್ತಾಪಿಸಿದ್ದಿದೆ.
ಪ್ರಮುಖ ಕಾವ್ಯಗಳು ಹುಟ್ಟಿದ್ದೇ ಶಿವಮೊಗ್ಗದಲ್ಲಿ :ಪ್ರೊ.ನಿಸಾರ್ ಅಹಮದ್ ಅವರ ಪಾಲಿಗೆ ಶಿವಮೊಗ್ಗ ತವರು ಮನೆಯಂತಾಗಿತ್ತು. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಅವರು ಮನಸೋತಿದ್ದರು. ಅಷ್ಟೇ ಅಲ್ಲ, ಅವರ ಹಲವು ಕವನ ಸಂಕಲನಗಳು ಹುಟ್ಟಿದ್ದೇ ಈ ಜಿಲ್ಲೆಯಲ್ಲಿ. ‘ಸಂಜೆ ಐದರ ಮಳೆ, ನಿತ್ಯೋತ್ಸವ, ಮನಸು ಗಾಂಧಿ ಬಜಾರ್ ಸೇರಿದಂತೆ ಪ್ರಮುಖ ಕವನಗಳು ಸಿದ್ದವಾಗಿದ್ದು ಇಲ್ಲೇ.’ ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಾದರೂ, ಶಿವಮೊಗ್ಗದೆಡೆ ಅತಿ ಹೆಚ್ಚು ಪ್ರೀತಿ ಹೊಂದಿದ್ದರು. ಆದ್ರೀಗ ಸಾಹಿತ್ಯ ಲೋಕದ ಮತ್ತೊಂದು ಅಪರೂಪದ ನಕ್ಷತ್ರ ಮರೆಯಾಗಿದೆ ಎನ್ನುತ್ತಾರೆ ಅವರ ಒಡನಾಡಿ ಡಿ ಮಂಜುನಾಥ್.