ಶಿವಮೊಗ್ಗ :ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೇರಲಾಗಿರುವ ಕರ್ಫ್ಯೂ ಫೆಬ್ರವರಿ 26ರ ತನಕ ಮುಂದುವರೆಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ನಿನ್ನೆ ಸಂಜೆ ಮಾಧ್ಯಮಗೋಷ್ಠಿ ನಡೆಸಿದ್ದ ಜಿಲ್ಲಾಧಿಕಾರಿಗಳು, ಫೆಬ್ರವರಿ 25ರ ಶುಕ್ರವಾರ ಬೆಳಗ್ಗೆ 6 ಗಂಟೆ ತನಕ ಕರ್ಫ್ಯೂ ಇರಲಿದೆ ಎಂದು ತಿಳಿಸಿದ್ದರು. ಆದರೆ, ಇಂದು ಮತ್ತೆ ಜಿಲ್ಲಾಧಿಕಾರಿಗಳು ಶನಿವಾರ ಬೆಳಗ್ಗೆ 6 ಗಂಟೆ ತನಕ ಕರ್ಪ್ಯೂ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ.
ಫೆಬ್ರವರಿ 20ರಂದು ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯ ಬಳಿಕ ನಗರದಲ್ಲಿ ನಡೆದ ಕೆಲ ಅಹಿತಕರ ಘಟನೆ ಬಳಿಕ ಕರ್ಫ್ಯೂ ಜಾರಿಯಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಆರ್ಎಎಫ್ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:ಪಾತ್ರೆತೊಳೆ ಎಂದಿದ್ದಕ್ಕೆ ತಾಯಿಗೆ ಬಾಣಲೆಯಿಂದ ಹೊಡೆದು ಕೊಲೆ ಮಾಡಿದ ಅಪ್ರಾಪ್ತ ಬಾಲಕಿ
ನಗರದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ನಕ್ಸಲ್ ನಿಗ್ರಹದಳದ ದ್ರೋಣ್ ತಂಡವೂ ಕೂಡ ಇಂದು ಆಗಮಿಸಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.