ಶಿವಮೊಗ್ಗ:ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದರೂ ಕೂಡ ರೈತರ ಹೆಸರಿನಲ್ಲಿ ಹೋರಾಟ ಮುಂದುವರೆಸುತ್ತಿರುವುದರ ಹಿಂದೆ ಷಡ್ಯಂತ್ರ ಇದೆ ಎಂಬ ಅನುಮಾನವನ್ನು ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಕ್ತಪಡಿಸಿದರು.
ರೈತರ ಹೋರಾಟ ಮುಂದುವರೆದಿರುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿರುವುದು.. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳಲ್ಲಿ ರೈತ ವಿರೋಧಿ ಅಂಶ ಯಾವುದು?, ರೈತ ತಾನು ಬೆಳೆದ ಬೆಳಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವುದು ಸ್ವತಂತ್ರವೇ, ರೈತ ವಿರೋಧಿಯೇ ಹಾಗೂ ಮಾರುಕಟ್ಟೆ ಕಪಿಮುಷ್ಟಿಯಿಂದ ರೈತರನ್ನು ಮುಕ್ತಗೊಳಿಸಿದ್ದು ಸ್ವಂತತ್ರವೇ ಅಥವಾ ಬೇಡಿಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದರು.
ಈಗಲೂ ಬೆಳೆ ಒಪ್ಪಂದಗಳಿವೆ. ಈ ಬೆಳೆ ಒಪ್ಪಂದವನ್ನು ಶಾಸನಬದ್ಧಗೊಳಿಸಿದ್ದು ತಪ್ಪೆ?, ರೈತ ತಾನು ಬೆಳೆದ ಬೆಳೆಯನ್ನು ಒಪ್ಪಂದದ ಮೂಲಕ ಮಾರಾಟ ಮಾಡಿದ 48 ಗಂಟೆಯೊಳಗೆ ರೈತನ ಖಾತೆಗೆ ಹಣ ಬರಬೇಕು ಎಂಬುದು ರೈತ ವಿರೋಧಿ ಅಂಶವೇ ಎಂದು ಪ್ರಶ್ನಿಸಿದರು.
ದೇಶದ ಬಹುತೇಕ ಜನ ಈ ಮಸೂದೆಯನ್ನು ಒಪ್ಪಿದ್ದರು. ಆದರೆ, ಕೆಲವು ರಾಜ್ಯಗಳಲ್ಲಿ ಒಪ್ಪದ ಕಾರಣ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಹೇಳಿದರೂ ಸಹ ದೇಶದಲ್ಲಿ ಅರಾಜಕತೆ ಸೃಷ್ಟಿಸಿ, ಯಾವ ಕ್ರಮ ತೆಗೆದುಕೊಳ್ಳದಂತೆ ಮಾಡಿ ಸರ್ಕಾರವನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿಸುವ ಯತ್ನ ನಡೆದಿದೆ.
ಒಂದು ವೇಳೆ ಇದರ ವಿರುದ್ಧ ಕ್ರಮ ಕೈಗೊಂಡರೆ ರೈತರ ಮೇಲೆ ಕ್ರಮ ಎಂದು ದೇಶವ್ಯಾಪಿ ಬಿಂಬಿಸಿ ಆಂದೋಲನ ರೂಪಿಸಬಹುದು. ಕ್ರಮ ತೆಗೆದುಕೊಳ್ಳದೆ ಹೋದರೆ ಅರಾಜಕತೆ ಎಂದು ಆರೋಪಿಸಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಬೇಕೆಂಬ ತುಕಡೆ ಗ್ಯಾಂಗ್ಗೆ ಬಲ ಕೊಡುವ ಕೆಲಸದ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದ ಬಗ್ಗೆ ದೇಶದ ಜನರಿಗೆ ವಿಶ್ವಾಸವಿದೆ. ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ, ಯೂರಿಯಾ ಗೊಬ್ಬರದ ಮೇಲೆ ಸಬ್ಸಿಡಿ ನೀಡಿ ರೈತರ ಮನ ಗೆದ್ದಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿಗೆ ಸಿಗುತ್ತಿರುವ ಬೆಂಬಲ ಸಹಿಸದೆ ಸಿದ್ದರಾಮಯ್ಯ ಹತಾಶರಾಗಿ ಮಾತನಾಡುತ್ತಿದ್ದಾರೆ : ಸಿ ಟಿ ರವಿ