ಶಿವಮೊಗ್ಗ:ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿರುವ ಪತ್ತೆಯಾಗಿರುವ ಘಟನೆ ಜಿಲ್ಲೆಯ ವಿಜಯನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಮಲಮ್ಮ (54) ಎಂದು ಗುರುತಿಸಲಾಗಿದೆ. ಉಸಿರುಗಟ್ಟಿಸಿ ಮಹಿಳೆಯ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ವಿಜಯನಗರದ ಎರಡನೇ ತಿರುವಿನಲ್ಲಿರುವ ಮನೆಯಲ್ಲಿ ಕಮಲಮ್ಮ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಮಲಮ್ಮ ಅವರ ಪತಿ ಮನೆಯಲ್ಲಿ ಇಲ್ಲದ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಶನಿವಾರ ಸಂಜೆ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಮೃತ ಕಮಲಮ್ಮ ಅವರ ಪತಿ ಮಲ್ಲಿಕಾರ್ಜುನ ಅವರು ಹೊಸದುರ್ಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಲ್ಲಿಕಾರ್ಜುನ ಅವರು ತಮ್ಮ ಸ್ನೇಹಿತರೊಂದಿಗೆ ಗೋವಾಗೆ ಪ್ರವಾಸ ತೆರಳಿದ್ದರು. ಅಲ್ಲಿಂದ ಪತ್ನಿ ಕಮಲಮ್ಮಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಮಲ್ಲಿಕಾರ್ಜುನ ಅವರು ಪಕ್ಕದ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವೇಳೆ ನೆರೆ ಮನೆಯವರು ಮಲ್ಲಿಕಾರ್ಜುನ ಅವರ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾವಣಗೆರೆಯಿಂದ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಶಿವಮೊಗ್ಗದ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊಲೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.