ಶಿವಮೊಗ್ಗ: ತೀರ್ಥಹಳ್ಳಿ ಪ್ರಸಿದ್ಧ ರೆಸಾರ್ಟ್ವೊಂದರಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ದಾಳಿ ನಡೆಸಿದೆ. ಎಸ್ಪಿ ಮಿಥುನ್ ಕುಮಾರ್ ಹಾಗೂ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ದಾಳಿ ವೇಳೆ ಅಂದಾಜು ಒಂದು ಲಕ್ಷ ರೂ. ಮೌಲ್ಯದ ಒಂದು ಡಬಲ್ ಬ್ಯಾರಲ್ ಬಂದೂಕು, 25 ಸಾವಿರ ರೂ. ಮೌಲ್ಯದ 310 ಜೀವಂತ ಗುಂಡುಗಳು, ಒಂದು ಕತ್ತಿ, ಒಂದು ಚಾಕು, 3 ಕಾಡು ಕೋಣ ಕೊಂಬಿನ ಟ್ರೋಫಿ, 6 ಜಿಂಕೆ ಕೊಂಬಿನ ಟ್ರೋಫಿ, 1 ಸಿ.ಸಿ ಡಿವಿಆರ್, 51 ಬಿಯರ್ ಟಿನ್, 1 ಲಕ್ಷ ಮೌಲ್ಯದ ವಿದೇಶಿ ಮದ್ಯದ ಬಾಟಲಿಗಳು, 6 ಬ್ರೀಜರ್ ಬಾಟಲ್ ಹಾಗೂ 3 ಲೀ. ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ತೀರ್ಥಹಳ್ಳಿ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ, ತೀರ್ಥಹಳ್ಳಿ ಪಿಐ ಅಶ್ವಥ್ ಗೌಡ, ತೀರ್ಥಹಳ್ಳಿ ಪಿಎಸ್ಐ ಸಾಗರದ ಅತ್ತರವಾಲ, ಮಾಳೂರು ಪಿಎಸ್ಐ ನವೀನ್ ಕುಮಾರ್ ಮಠಪತಿ, ಆಗುಂಬೆ ಪಿಎಸ್ಐ ರಂಗನಾಥ ಅಂತರಗಟ್ಟಿ, ರಿಪ್ಪನಪೇಟೆ ಪಿಎಸ್ಐ ಪ್ರವೀಣ್ ಹಾಗೂ 50 ಜನ ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ದಾಳಿಯ ವೇಳೆ ಯಾರನ್ನು ಬಂಧಿಸಲಾಗಿದೆ?, ಅಥವಾ ರೆಸಾರ್ಟ್ನಲ್ಲಿ ಇದ್ದವರು ಪರಾರಿಯಾಗಿದ್ದಾರಾ? ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಕಾರಿನಲ್ಲಿ ಗಾಂಜಾ ಸಾಗಣೆ-ವಾಹನ ಸಮೇತ ಆರೋಪಿಗಳ ಬಂಧನ:ಫಾರ್ಚುನರ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ನಿವಾಸಿ ಯೂನಸ್ ಖಾನ್ (29), ಬಾಳೆಬೈಲಿನ ಅತೀಫ್ ಖಾನ್(32) ಹಾಗೂ ತೀರ್ಥಹಳ್ಳಿ ಸೂಪ್ಪುಗುಡ್ಟೆಯ ಮನೋಜ್(32) ಬಂಧಿತರು.
ಶಿವಮೊಗ್ಗದಿಂದ ತೀರ್ಥಹಳ್ಳಿ ಪಟ್ಟಣಕ್ಕೆ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾಳೂರು ಪೊಲೀಸ್ ಠಾಣೆಯ ಪಿಎಸ್ಐ ನವೀನ ಮಠಪತಿ ಅವರು ತಪಾಸಣೆ ನಡೆಸಿದಾಗ ಡಿಕ್ಕಿಯಲ್ಲಿ ಅಂದಾಜು 10 ಸಾವಿರ ರೂ. ಮೌಲ್ಯದ 173 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.
ಗಾಂಜಾ ಮಾರಾಟ-ಮೂವರ ಬಂಧನ:ಭದ್ರಾವತಿಯ ಫ್ಲೈಓವರ್ ಕೆಳಗಡೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಭದ್ರಾವತಿ ಹಳೇ ನಗರ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿಗಳಾದ ಮುಬಾರಕ್ ಅಲಿಯಾಸ್ ಡಿಚ್ಚಿ(27) ಬಾಬು (20) ಹಾಗೂ ಪರ್ವೀಜ್ (25) ಬಂಧಿತ ಆರೋಪಿಗಳು. ಇವರಿಂದ 50 ಸಾವಿರ ರೂ. ಮೌಲ್ಯದ 1. ಕೆಜಿ 408 ಗ್ರಾಂ ತೂಕದ ಒಣ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ನಾಲ್ವರ ಬಂಧನ: ನಗರದ ಹೊರ ಭಾಗ ಒಡ್ಡಿನಕೊಪ್ಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಇಎನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಅಲಿಯಾಸ್ ಮೋಟು(23), ವಿಶಾಲ್ ಅಲಿಯಾಸ್ ಡಾಲು(25), ನಿತೀಶ್ (21) ಹಾಗೂ ಪ್ರೀತಂ ಅಲಿಯಾಸ್ ಡಿಟೋ(22) ಬಂಧಿತ ಆರೋಪಿಗಳು. ಬಂಧಿತರಿಂದ 1.10 ಲಕ್ಷ ರೂ ಮೌಲ್ಯದ 2 ಕೆ.ಜಿ ಒಣ ಗಾಂಜಾ ಕೃತ್ಯಕ್ಕೆ ಬಳಸಿದ 2.50 ಲಕ್ಷ ರೂ. ಮೌಲ್ಯದ ಡ್ಯೂಕ್ ಬೈಕ್ನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಪ್ರವೀಣ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿವೆ. ಈತ 2024ರ ಏಪ್ರಿಲ್ ತನಕ ಗಡಿಪಾರು ಆಗಿದ್ದವನು. ಆದರೂ ಜಿಲ್ಲೆಗೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ. ಇನ್ನುಳಿದ ವಿಶಾಲ್ ಹಾಗೂ ಪ್ರೀತಂ ರೌಡಿ ಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೈಲುಕುಪ್ಪೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಐವರ ಬಂಧನ, 30 ಕೆಜಿ ಮಾದಕವಸ್ತು ವಶಕ್ಕೆ