ಶಿವಮೊಗ್ಗ: ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಕರೆಯುತ್ತಾರೆ. ಆದರೆ, ಇಂತಹ ದೇವರನ್ನೇ ಹೆತ್ತ ಮಗನೊಬ್ಬ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಭದ್ರಾವತಿ ಪಟ್ಟಣದ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಾವಿನಕೆರೆ ಕಾಲೋನಿ ನಿವಾಸಿ ಸುಲೋಚನಮ್ಮ ಮೃತರು. ಆಕೆಯ ಮಗ ಸಂತೋಷ್ ಕೊಲೆ ಆರೋಪಿ. ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ಸಂತೋಷ್ ತನ್ನ ತಾಯಿಯನ್ನು ಬಡಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತೋಟದಲ್ಲಿ ಮಲಗಿ ಕೊಂಡಿದ್ದಾನೆ ಎಂಬುವುದು ಸ್ಥಳೀಯರ ಆರೋಪ.
ಸುಲೋಚನಮ್ಮ ಅವರಿಗೆ ಇಬ್ಬರು ಮಕ್ಕಳು. ಇನ್ನೊಬ್ಬ ಮಗ ತಾಯಿಯಿಂದ ಬೇರೆ ವಾಸ ಮಾಡುತ್ತಿದ್ದಾರೆ. ಸಂತೋಷ್ ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಹಣ ನೀಡದೇ ಕುಡಿದುಕೊಂಡು ಬರುತ್ತಿದ್ದನಂತೆ. ಮದುವೆಯಾಗಿ ಮಕ್ಕಳಿದ್ದರೂ ದುಡಿದು ಸಂಸಾರ ನಡೆಸದೇ ದುಡಿದ ಎಲ್ಲ ಹಣವನ್ನು ವ್ಯರ್ಥ ಮಾಡುತ್ತಿದ್ದನಂತೆ. ಇದರಿಂದ ಸಂತೋಷ್ ಹೆಂಡತಿ ತನ್ನ ಮಕ್ಕಳ ಜತೆ ಎಂ.ಸಿ ಹಳ್ಳಿಗೆ ಹೋಗಿ ನೆಲೆಸಿದ್ದಾರೆ. ಅಲ್ಲಿಗೂ ಹೋಗಿ ಆರೋಪಿ ಕಿರಿಕಿರಿಯನ್ನುಂಟು ಮಾಡುತ್ತಿದ್ದನಂತೆ. ಹಗಲು ರಾತ್ರಿ ಎನ್ನದೇ ಕುಡಿದು ಅಲೆಯುತ್ತಿದ್ದ ಆತ ಭಾನುವಾರ ರಾತ್ರಿ ಕುಡಿಯಲು ಹಣ ನೀಡುವಂತೆ ತಾಯಿಯನ್ನು ಕೇಳಿದ್ದಾನೆ. ಈ ವಿಚಾರಕ್ಕೆ ತಾಯಿ ಮಗನ ನಡುವೆ ಜಗಳ ನಡೆದಿದೆ. ಕುಡಿಯಲು ಹಣ ಸಿಗದ ಕಾರಣ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:Honor Killing: ಪ್ರಿಯಕರನೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಯುವತಿ.. ಕುಟುಂಬಸ್ಥರಿಂದ ಮರ್ಯಾದಾ ಹತ್ಯೆ