ಶಿವಮೊಗ್ಗ:ಸಾಗರದ ವಸತಿ ಶಾಲೆಯಲ್ಲಿ 13 ವರ್ಷ ವಯಸ್ಸಿನ ಬಾಲಕಿ ಜೂನ್ 8 ರಂದು ಶಾಲೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಾವನ್ನಪ್ಪಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ವಸತಿ ಶಾಲೆಯ ಮುಖ್ಯಸ್ಥ ಮಂಜಪ್ಪ ಎಂಬುವವರನ್ನು ಪೊಕ್ಸೋ ಪ್ರಕರಣದಡಿ ಬಂಧಿಸಲಾಗಿದೆ. ಮೃತ ಬಾಲಕಿಯ ಚಿಕ್ಕಮ್ಮ ಹಾಗೂ ಆಕೆಯ ಜೊತೆ ಶಾಲೆಯಲ್ಲಿದ್ದ ಮಕ್ಕಳಿಬ್ಬರ ಹೇಳಿಕೆಯ ಮೇರೆಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ಶಾಲೆಯ ಮುಖ್ಯಸ್ಥ ಮಂಜಪ್ಪನನ್ನು ಬಂಧಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಇನ್ನು ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದದ್ದಾದರು ಏನು?:ಮೃತ ಬಾಲಕಿ ಸೊರಬ ತಾಲೂಕು ಶಿವಪುರ ಗ್ರಾಮದ ನಿವಾಸಿ. ಇವರ ತಂದೆ ಕೃಷಿಕರು. ಮಗಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಲಿ ಎಂದು ಸಾಗರದ ಶಾಲೆಗೆ ಸೇರಿಸಿದ್ದರು. ವಸತಿ ಶಾಲೆಗೆ ಸೇರಿ ಕೇವಲ ಐದು ದಿನಗಳಾಗಿತ್ತು. ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ರಾತ್ರಿ ಮಲಗಿದ್ದವರು ಬೆಳಗ್ಗೆ ಕೊಠಡಿಯಿಂದ ಹೊರ ಬಾರದ ಕಾರಣ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ಹೋದಾಗ ವಾಂತಿ- ಭೇದಿ ಆಗಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿನಿ ಪ್ರಜ್ಞಾಹೀನಳಾಗಿದ್ದಳು. ತಕ್ಷಣವೇ ಸಾಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು.
ಈ ಘಟನೆ ಕುರಿತು ಅಂದಿನ ದಿನ ಪ್ರತಿಕ್ರಿಯಿಸಿದ ವಸತಿ ಶಾಲಾ ಮುಖ್ಯಸ್ಥ ಮಂಜಪ್ಪ, ವಿದ್ಯಾರ್ಥಿನಿ ಐದು ದಿನಗಳ ಹಿಂದೆ ನಮ್ಮ ಶಾಲೆಗೆ ದಾಖಲಾಗಿದ್ದಳು. ಆದರೆ ನಿನ್ನೆ (ಘಟನೆಯ ಹಿಂದಿನ ದಿನ) ಕಾಲು ನೋವೆಂದು ಹೇಳಿದ್ದಾಳೆ. ಅದಕ್ಕೆ ನಾವು ಜೆಲ್ ಎಣ್ಣೆ ಹಚ್ಚಿ, ಮೈಕೈ ನೋವಿಗೆ ಕೊಡುವಂತಹ ಮೆಣಸಿನಕಾಳು ಸಾರು ಕೊಟ್ಟಿದ್ದೇವೆ.