ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಆರ್ಭಟ ತಡೆಯಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಆದರೂ ಸಹ ಜಿಲ್ಲೆಯಲ್ಲಿ ಸರ್ಕಾರಿ ಅಂಕಿ-ಅಂಶದ ಪ್ರಕಾರ ಸೋಂಕಿತರ ಪ್ರಮಾಣ ಏರುತ್ತಿದೆ. ಇದರಿಂದ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೆತ್ತಿಕೊಳ್ಳುತ್ತಿದೆ. ಕೋವಿಡ್ ಹಾಸ್ಪಿಟಲ್, ಕೋವಿಡ್ ಕೇರ್ ಸೆಂಟರ್ಸ್, ಖಾಸಗಿ ಆಸ್ಪತ್ರೆಗಳು ಮತ್ತೆ ಕಾರ್ಯೋನ್ಮುಖವಾಗುತ್ತಿವೆ.
40 ಕೋವಿಡ್ ಪರೀಕ್ಷಾ ಕೇಂದ್ರ :ಜಿಲ್ಲೆಯಲ್ಲಿ ಮೆಗ್ಗಾನ್ ಬೋಧನಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೀಗೆ ಹಲವೆಡೆ ಇರುವ ಪರೀಕ್ಷಾ ಕೇಂದ್ರಗಳು ಸೇರಿ ಜಿಲ್ಲೆಯಲ್ಲಿ 40 ಕೋವಿಡ್ ಟೆಸ್ಟಿಂಗ್ ಸೆಂಟರ್ಗಳಿವೆ. ಮೊದಲನೇ ಅಲೆ ಕಡಿಮೆಯಾಗುತ್ತಿದ್ದಂತಯೇ ಸೆಂಟರ್ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಆದ್ರೀಗ ಎರಡನೇ ಅಲೆ ಆರ್ಭಟ ಜೋರಾಗಿದೆ. ಪುನಾ ಈ ಕೇಂದ್ರಗಳನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಪಡೆದು ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಸೊಂಕಿತರನ್ನು ಗುರುತಿಸುವುದು ಸುಲಭ.
ನಿತ್ಯ 3 ಸಾವಿರ ಮಂದಿಗೆ ಟೆಸ್ಟ್ :ಜಿಲ್ಲೆಯಲ್ಲಿ ನಿತ್ಯ 2 ರಿಂದ 3 ಸಾವಿರದವರೆಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಆರ್‌ಟಿಪಿಎಸ್ ಹಾಗೂ ರ್ಯಾಪಿಡ್ ಪರೀಕ್ಷೆ ಸೇರಿವೆ. ಜಿಲ್ಲೆಯಲ್ಲಿ ಸರಾಸರಿ 2.5ರಂತೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಕೊನೆ ಘಳಿಗೆವರೆಗೂ ಕಾಯದಿರಿ :ಕೋವಿಡ್ ಲಕ್ಷಣ ಕಂಡು ಬಂದ ತಕ್ಷಣ ಸಮೀಪದ ಆರೋಗ್ಯ ಕೇಂದ್ರ, ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ನಡೆಸಿಕೊಳ್ಳಬೇಕಿದೆ. ಸೋಂಕಿತರು ಅದಷ್ಟು ಬೇಗ ಪರೀಕ್ಷೆಗೆ ತಮ್ಮನ್ನು ತಾವು ಒಳಪಡಿಸಿಕೊಂಡರೆ, ಅವರಿಗೆ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಕೊನೆ ವೇಳೆಯಲ್ಲಿ ಬಂದಾಗ ಚಿಕಿತ್ಸೆ ನೀಡಿದರೂ ಸಹ ಅದು ಪ್ರಯೋಜನವಾಗದಿರುವ ಹಲವು ನಿದರ್ಶನಗಳಿವೆ. ಹಾಗಾಗಿ, ಸೋಂಕಿತರು ಆದಷ್ಟು ಬೇಗ ಪರೀಕ್ಷೆಗೊಳಗಾಗಿ, ಚಿಕಿತ್ಸೆ ಪಡೆಯಬೇಕಿದೆ.