ಶಿವಮೊಗ್ಗ:ಕೋವಿಡ್ ಎಂಬ ಮಹಾಮಾರಿ ಸಾಕಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ದಿನೇ ದಿನೆ ಸಾವು ನೊವು ಹೆಚ್ಚುತ್ತಿದೆ. ಇದೀಗ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದೆ. ಉಳಿದಂತೆ ಕೋವಿಡ್ ಭೀತಿಯಿಂದ ಜನರು ಹೊರ ಬರುವುದು ಕಡಿಮೆಯಾಗಿದೆ. ಹಾಗಾಗಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ.
ಕೋವಿಡ್ ಎರಡನೇ ಅಲೆಗೆ ನಡುಗಿದ ಕ್ಯಾಬ್ ಮಾಲೀಕರು-ಚಾಲಕರು ಕ್ಯಾಬ್ ಪ್ರತಿ ದಿನ ಸಂಚರಿಸಿದರೆ ಮಾತ್ರ ಚಾಲಕರು ಹಾಗೂ ಮಾಲೀಕರ ಜೀವನ ಸುಖಕರವಾಗಿ ನಡೆಯುತ್ತದೆ. ಇಲ್ಲವಾದರೆ ಇವರ ಜೀವನ ನಿರ್ವಹಣೆ ಹೇಗೆ? ಹೌದು, ಕ್ಯಾಬ್ ಮಾಲೀಕರು ಹಾಗೂ ಚಾಲಕರು ಕೋವಿಡ್ನ ಮೊದಲ ಅಲೆಯ ಪರಿಣಾಮದಿಂದಲೇ ಚೇತರಿಸಿಕೊಂಡಿಲ್ಲ. ಇದೀಗ ಎರಡನೇ ಅಲೆ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಸೃಷ್ಟಿಸಿದೆ. ಮೊದಲ ಅಲೆಯ ನಂತರ ಕ್ಯಾಬ್ನತ್ತ ಜನ ಮುಖ ಮಾಡುವಷ್ಟರಲ್ಲಿ ಮತ್ತೆ ಕೋವಿಡ್ ಎರಡನೇ ಅಲೆ ಬಂದು ಕ್ಯಾಬ್ ಮಾಲೀಕರು ಹಾಗೂ ಚಾಲಕರ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಹೆಚ್ಚಾಗಿವೆ. ಇಲ್ಲಿಗೆ ಬರುವ ಪ್ರವಾಸಿಗರು ಹೆಚ್ಚಾಗಿ ಕ್ಯಾಬ್ ಸೇವೆಗೆ ಅವಲಂಬಿತರಾಗಿದ್ದರು. ಸ್ಥಳೀಯ ಕ್ಯಾಬ್ ಬುಕ್ ಮಾಡಿಕೊಂಡು ಒಂದು ಎರಡು ದಿನದ ಪ್ರವಾಸ ಮುಗಿಸಿ ವಾಪಸ್ ತೆರಳುತ್ತಿದ್ದರು. ಆದರೀಗ ಕೋವಿಡ್ ಭೀತಿ, ಕರ್ಫ್ಯೂ ಸಲುವಾಗಿ ಕ್ಯಾಬ್ ವ್ಯವಹಾರ ನಡೆಯುತ್ತಿಲ್ಲ.
ಕ್ಯಾಬ್ ಮಾಲೀಕರು ಸಾಲ ಮಾಡಿ ಕ್ಯಾಬ್ ಖರೀದಿ ಮಾಡಿ ಕ್ಯಾಬ್ ತೆಗೆದುಕೊಂಡು ಜೀವನ ನಡೆಸುತ್ತಿದ್ದರು. ಈಗ ಬ್ಯಾಂಕ್ ಸಾಲ ಕಟ್ಟಲಾಗದೆ ಕಾರುಗಳನ್ನೇ ಮಾರುತ್ತಿದ್ದಾರೆ. ಎರಡು ಮೂರು ಕ್ಯಾಬ್ ಇರುವವರು ಒಂದನ್ನು ಮಾರಿ ಉಳಿದ ಎರಡು ಕ್ಯಾಬ್ ಉಳಿಸಿಕೊಳ್ಳುವತ್ತ ಚಿತ್ತ ಹರಿಸುತ್ತಿದ್ದಾರೆ. ಕ್ಯಾಬ್ ಸಾಲ 4ರಿಂದ 5 ಲಕ್ಷ ಇದ್ದರೆ ಮಾರಲು ಹೋದ್ರೆ 2ರಿಂದ 3 ಲಕ್ಷಕ್ಕೆ ಕೇಳುತ್ತಿದ್ದಾರೆ. ಇದು ಕ್ಯಾಬ್ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ಸಾಲ ತೀರಿಸುವುದೋ ಅಥವಾ ಜೀವನ ನಡೆಸುವುದೋ ಎಂಬ ಗೂಂದಲದಲ್ಲಿ ಕ್ಯಾಬ್ ಮಾಲೀಕರಿದ್ದಾರೆ.
ಇದನ್ನೂ ಓದಿ:ಕ್ಯಾಬ್ ವ್ಯವಹಾರದ ಮೇಲೆ ಕೋವಿಡ್ ಎರಡನೇ ಅಲೆ ಕೆಂಗಣ್ಣು
ಕ್ಯಾಬ್ ಚಾಲಕರಿಗೆ ಈ ವೃತ್ತಿ ಬಿಟ್ಟರೆ ಬೇರೆ ವೃತ್ತಿ ಗೂತ್ತಿಲ್ಲ ಎನ್ನುವ ಪರಿಸ್ಥಿತಿ ಇದೆ. ಆದರೆ ಇತ್ತಿಚೀನ ದಿನಗಳಲ್ಲಿ ಕ್ಯಾಬ್ ಮೇಲಿನ ಅವಲಂಬನೆ ಕಡಿಮೆ ಆಗುತ್ತಿದೆ. ಸ್ವಂತ ಕಾರನ್ನು ಖರೀದಿಸುವವರು ಹೆಚ್ಚಾಗಿದ್ದಾರೆ ಮತ್ತು ಕೋವಿಡ್ ಭಿತಿ ಕಾರಣ ಜನರು ತಮ್ಮ ಓಡಾಟ ಕಡಿಮೆ ಮಾಡಿದ್ದಾರೆ.. ಸರ್ಕಾರ ಕಳೆದ ವರ್ಷ 5 ಸಾವಿರ ರೂ. ನೀಡುವುದಾಗಿ ಹೇಳಿತ್ತು. ಇದು ಶೇ. 5ರಷ್ಟು ಚಾಲಕರಿಗೆ ಮಾತ್ರ ಹಣ ತಲುಪಿದೆ. ಉಳಿದವರಿಗೆ ಇನ್ನೂ ತಲುಪಿಲ್ಲ. ಸರ್ಕಾರ ಒಂದು ಕಡೆ ಹಣ ನೀಡಿ ಇನ್ನೂಂದು ಕಡೆ ಸಾಲದ ಹಣ ಎಂದು ಕಟ್ ಮಾಡಿಕೊಂಡಿದೆ. ಸರ್ಕಾರ ನಮಗೆ ಸಹಾಯ ಮಾಡಬೇಕಿದೆ ಎನ್ನುತ್ತಾರೆ ಚಾಲಕರು.