ಶಿವಮೊಗ್ಗ: ನಗರದ ಹೊರವಲಯದ ಅಬ್ಬಲಗೆರೆಯ ಮುದ್ದಣ್ಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಪ್ರಕರಣ ಸಂಬಂಧ ನಿಗದಿತ ಅವಧಿಯಲ್ಲಿ ವರದಿ ನೀಡದ ಕಾರಣಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ಕರ್ನಾಟಕ ರಾಜ್ಯ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ.
ಮುದ್ದಣ್ಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಕುರಿತು ಭೂ ನ್ಯಾಯಾಧೀಕರಣವು ಸ್ವಯಂ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ವೇಳೆ ಕೆರೆಯಲ್ಲಿ 500 ಲೋಡ್ ಮಣ್ಣನ್ನು ಎತ್ತಲು ಅನುಮತಿ ಪಡೆದು, 15,004 ಲೋಡ್ ಮಣ್ಣನ್ನು ಎತ್ತಲಾಗಿದೆ. ಇದರಿಂದ ಸರ್ಕಾರಕ್ಕೆ 71.45 ಲಕ್ಷ ರೂ. ನಷ್ಟವಾಗಿದೆ ಎಂದು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿತ್ತು. ದೂರು ದಾಖಲಿಸಿಕೊಂಡ ನಂತರ ನವೆಂಬರ್ನಲ್ಲಿ ಅಕ್ರಮವಾಗಿ ಮಣ್ಣು ಎತ್ತಿರುವ ಕುರಿತು ವರದಿಯನ್ನು ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಕೋರ್ಟ್ ಆದೇಶ ಮಾಡಿತ್ತು.