ಶಿವಮೊಗ್ಗ:ಮಾನಸಿಕ ಖಿನ್ನತೆಗೆ ಒಳಗಾಗಿದ್ದ ದಂಪತಿ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗದ ಆಲ್ಕೊಳ ಬಡಾವಣೆಯಲ್ಲಿ ನಡೆದಿದೆ. ಆಲ್ಕೊಳದ ಮುಖ್ಯ ರಸ್ತೆಯ ನಿವಾಸಿಗಳಾದ ರಾಮದಾಸ್ (56) ಹಾಗೂ ಅನುಪಮಾ (50) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ತಿಳಿದುಬಂದಿದೆ.
ರಾಮದಾಸ್ ದಂಪತಿಗೆ ವಿಖ್ಯಾತ್ ಎಂಬ ಮಗನಿದ್ದು, ಚಿತ್ರದುರ್ಗದ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದಾನೆ. ಗುರುವಾರ ಸಂಜೆ ಮನೆಯಲ್ಲಿ ದಂಪತಿ ಹಾಗೂ ಮಗ ವಿಖ್ಯಾತ ನಡುವೆ ಗಲಾಟೆ ನಡೆದಿದೆ. ಆ ನಂತರ ರಾಮದಾಸ್ ಹಾಗೂ ಅನುಪಮಾ ತಮ್ಮ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಗಲಾಟೆ ನಡೆದು ತಕ್ಷಣ ತಣ್ಣಗಾಗಿರುವುದನ್ನು ಗಮನಿಸಿದ ಸ್ಥಳೀಯರು ಮನೆಗೆ ಬಂದು ಪರಿಶೀಲಿಸಿದಾಗ ದಂಪತಿ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ. ಈ ವೇಳೆ ವಿಖ್ಯಾತ್ ಪಕ್ಕದ ಕೋಣೆಯಲ್ಲೇ ಇದ್ದ ಎನ್ನಲಾಗಿದೆ.