ಕರ್ನಾಟಕ

karnataka

ETV Bharat / state

ಸಿಗಂಧೂರಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣವಾಗುತ್ತಿದೆ ದೇಶದ ವಿಶಿಷ್ಟ ಸೇತುವೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶ್ರೀ ಸಿಗಂಧೂರು ಚೌಡೇಶ್ವರಿ ತಾಯಿಯ ಸನ್ನಿಧಿಯ ಸಮೀಪ ಸುಮಾರು 423 ಕೋಟಿ ರೂ ವೆಚ್ಚದಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ 2.4 ಕಿಲೋಮೀಟರ್ ಉದ್ದದ ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ.

Country's unique bridge is being built to connect Sigandoor
ಸಿಗಂಧೂರಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣವಾಗುತ್ತಿದೆ ದೇಶದ ವಿಶಿಷ್ಟ ಸೇತುವೆ

By

Published : May 27, 2020, 8:24 PM IST

ಶಿವಮೊಗ್ಗ:ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರಿಗೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 423 ಕೋಟಿ ರೂ ವೆಚ್ಚದಲ್ಲಿ ಮಾಡಲಾಗುತ್ತಿದೆ.

ಜಿಲ್ಲೆ ಸಾಗರ ತಾಲೂಕಿನ ಶ್ರೀ ಸಿಗಂಧೂರು ಚೌಡೇಶ್ವರಿ ತಾಯಿಯ ಸನ್ನಿಧಿಯ ಸಮೀಪ ಸುಮಾರು 423 ಕೋಟಿ ರೂ ವೆಚ್ಚದಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ 2.4 ಕಿಲೋಮೀಟರ್ ಉದ್ದದ ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ.

ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್ ನಿರ್ಮಾಣ

ಇದುವರೆಗೆ ಸಿಗಂಧೂರು ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ಬರುವ ಭಕ್ತರು ಶ್ರೀಕ್ಷೇತ್ರಕ್ಕೆ ತೆರಳಲು ಲಾಂಚ್​ನಲ್ಲಿ ಹೋಗಲು ಹರಸಾಹಸ ಪಡಬೇಕಾಗಿತ್ತು. ಜೊತೆಗೆ ಈ ಮಾರ್ಗದಲ್ಲಿ ಕೊಲ್ಲೂರು ಕ್ಷೇತ್ರ ತುಂಬಾ ಸಮೀಪ. ಆದರೆ, ಸಂಜೆ ವೇಳೆಗಾಗಲೇ ಲಾಂಚ್​ಗಳು ಸಂಚಾರ ಸ್ಥಗಿತಗೊಳಿಸುತ್ತಿದ್ದರಿಂದ ಸಾಗರ- ಸಿಗಂದೂರು- ಕೊಲ್ಲೂರು ಸಂಪರ್ಕವೇ ಕಡಿತಗೊಳ್ಳುತ್ತಿತ್ತು. ಸ್ವಲ್ಪ ತಡವಾದರೆ ಸಾಕು ಸಿಗಂಧೂರಿಗೆ ತೆರಳಿದ್ದ ಭಕ್ತರು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಅಲ್ಲೇ ಉಳಿಯುವಂತಾಗುತ್ತಿತ್ತು.

ಸಿಗಂಧೂರಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣವಾಗುತ್ತಿದೆ ದೇಶದ ವಿಶಿಷ್ಟ ಸೇತುವೆ

ಹ್ಯಾಂಗಿಂಗ್​ ಬ್ರಿಡ್ಜ್​ ನಿರ್ಮಾಣ:

ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಯ ಅರ್ಧದಷ್ಟು ಭಾಗ ಹ್ಯಾಂಗಿಂಗ್ ಬ್ರಿಡ್ಜ್ ಆಗಿರಲಿದೆ. ದೇಶದಲ್ಲಿ ಎರಡನೇ ಅತೀ ಉದ್ದದ ಸೇತುವೆ ಹಾಗೂ ಅತೀ ಆಳದ ನೀರಿನಲ್ಲಿ ನಿರ್ಮಾಣವಾಗುತ್ತಿರುವ ದೇಶದ ಮೊದಲ ಸೇತುವೆ ಎಂಬ ಹೆಗ್ಗಳಿಕೆಯೂ ಈ ಸೇತುವೆಗಿದೆ. ಶರಾವತಿಯ ಹಿನ್ನೀರಿನ ನೂರಾರು ಅಡಿ ಆಳದಿಂದ ಪೈಪ್​ಲೈನ್​ಗಳನ್ನು ಕಟ್ಟಿ ಅವುಗಳ ಮೇಲೆ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್ ಎಂದು ಕರೆಯಲಾಗುತ್ತಿದೆ.

ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್ ನಿರ್ಮಾಣ

ವಿನೂತನ ತಂತ್ರಜ್ಞಾನ ಬಳಕೆ:

ಅತಿ ಹೆಚ್ಚಿನ ಆಳ ಹೊಂದಿರುವ ಜಲಾಶಯಗಳಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯ ಅಗ್ರಸ್ಥಾನದಲ್ಲಿದೆ. ಇಷ್ಟು ಆಳದ ನೀರಿನಲ್ಲಿ ಸೇತುವೆ ನಿರ್ಮಾಣ ಅಸಾಧ್ಯ ಎಂಬ ಕಾರಣದಿಂದಾಗಿ ಇದುವರೆಗೆ ಸೇತುವೆ ಈ ಭಾಗದ ಜನರಿಗೆ ಗಗನ ಕುಸುಮವಾಗಿಯೇ ಉಳಿದಿತ್ತು. ಇದೀಗ ವಿನೂತನ ತಂತ್ರಜ್ಞಾನ ಬಳಸಿಕೊಂಡು ದೇಶದ ವಿಶಿಷ್ಟ ಸೇತುವೆ ನಿರ್ಮಾಣ ಕಾರ್ಯ ಆರಂಭ ಮಾಡಲಾಗಿದ್ದು, ಇನ್ನೆರಡು ವರ್ಷಗಳಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಸೇತುವೆಯ ಕುರಿತ ಮಾಹಿತಿ:

ಇನ್ನೂ ಸಿಗಂಧೂರು ಸೇತುವೆ ಬರೋಬ್ಬರಿ 2.4 ಕಿಲೋಮೀಟರ್ ಇರಲಿದ್ದು, ಇಲ್ಲಿರುವ ನೀರು 50 ಮೀಟರ್​ ಆಳವಾಗಿದೆ. ಹಾಗಾಗಿ ಎಲ್ಲಾ ಬ್ರಿಡ್ಜ್​​ಗಳಂತೆ ಪಿಲ್ಲರ್​​ಗಳನ್ನು ನಿರ್ಮಾಣ ಮಾಡಿ ಸೇತುವೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ 2.4 ಕಿಲೋಮೀಟರ್ ಉದ್ದದ ಸೇತುವೆಯನ್ನು ಕೇವಲ 17 ಪಿಲ್ಲರ್​​ಗಳನ್ನು ಬಳಸಿಕೊಂಡು ಸೇತುವೆ ನಿರ್ಮಾಣ ಮಾಡಲಾಗಿದೆ. ಅದರಲ್ಲೂ ನೀರಿನ ಮಧ್ಯ ಭಾಗದಲ್ಲಿ ನೀರಿನ ಆಳ ಹೆಚ್ಚಾಗಿದ್ದು, ಅಲ್ಲಿ ಪಿಲ್ಲರ್ ನಿರ್ಮಾಣ ಮಾಡಲು ಕಷ್ಟ ಸಾಧ್ಯವಿರುವುದರಿಂದ ಇಲ್ಲಿ ನಾಲ್ಕು ಪಿಲ್ಲರ್ ಮಾತ್ರ ನಿರ್ಮಾಣ ಮಾಡಿ 700 ಮೀಟರ್ ತೂಗು ಸೇತುವೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಸೇತುವೆ 16 ಮೀಟರ್ ಅಗಲವಿರಲಿದೆ. ಸೇತುವೆ ಇಬ್ಬದಿಯಲ್ಲಿ ತಲಾ 1.5 ಮೀಟರ್ ಫುಟ್​​ಪಾತ್ ಇರಲಿದೆ. 11 ಮೀಟರ್ ಕ್ಯಾರೇಜ್ ರಸ್ತೆ ಸೇತುವೆ ಮೇಲಿರಲಿದೆ.

ಇನ್ನೂ ಎಲ್ಲಿ ಪಿಲ್ಲರ್​​ಗಳನ್ನು ನಿರ್ಮಾಣ ಮಾಡಿ ಸೇತುವೆ ನಿರ್ಮಿಸಲು ಸಾಧ್ಯವಿಲ್ಲವೋ ಅಲ್ಲಿ ಈ ರೀತಿಯ ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್​​ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದುವರೆಗೆ ಭಾರತ ದೇಶದಲ್ಲಿರುವುದು ಕೇವಲ 7 ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್​​ಗಳು ಮಾತ್ರ. ಅದರಲ್ಲಿ ಇದೀಗ ಸಿಗಂಧೂರಿನಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಭಾರತದ ಎರಡನೇ ಅತಿ ಉದ್ದದ ಎಕ್ಸ್ ಟ್ರಾ ಡೋಸ್ ಕೇಬಲ್ ಸ್ಟೇ ಬ್ರಿಡ್ಜ್ ಆಗಲಿದೆ. ಎಕ್ಸ್ ಟ್ರಾ ಡೋಸ್ ಸ್ಟೇ ಬ್ರಿಡ್ಜ್​​ನಲ್ಲಿ ನಿಗದಿಗಿಂತ ಹೆಚ್ಚಿನ ದೂರದಲ್ಲಿ ಪಿಲ್ಲರ್​​ಗಳನ್ನು ನಿರ್ಮಿಸಿ ಅವುಗಳ ಮೇಲೆ ಪೈಪ್​ಲೈನ್ ನಿರ್ಮಿಸಿ ಸೇತುವೆ ನಿರ್ಮಾಣ ಮಾಡಲಾಗುತ್ತದೆ.

ಇಲ್ಲಿ ಸೇತುವೆ ಸಂಪೂರ್ಣವಾಗಿ ಪಿಲ್ಲರ್ ಮೇಲೆ ಅವಲಂಬಿತವಾಗಿರುವುದಿಲ್ಲ. ಪಿಲ್ಲರ್ ಗಳ ಜೊತೆಗೆ ವಿನೂತನ ತಂತ್ರಜ್ಞಾನದಲ್ಲಿ ಅಳವಡಿಸಿರುವ ಕೇಬಲ್ ಗಳನ್ನೂ ಸೇತುವೆ ಅವಲಂಬಿಸಿರುತ್ತದೆ. ಹೀಗಾಗಿ ಈ ರೀತಿಯ ಸೇತುವೆಗಳು ಅತೀ ಸುರಕ್ಷಿತ ಎನ್ನಲಾಗಿದೆ. ಜೊತೆಗೆ ಸೇತುವೆ ಕಾಮಗಾರಿ ವೇಗವಾಗಿ ನಡೆಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಸಹ ಖುಷಿಯಾಗಿದ್ದಾರೆ.

ಈ ವಿನೂತನ ಸೇತುವೆ ಬೇಗನೆ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಸಿಗುವ ಜೊತೆಗೆ ರಾಜ್ಯದ ಪ್ರಮುಖ ಪ್ರವಾಸಿ ತಾಣವಾದರೇ ಮಲೆನಾಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಷಯವಾಗಲಿದೆ.

ABOUT THE AUTHOR

...view details