ಶಿವಮೊಗ್ಗ:ಕೊರೊನಾ ವೈರಸ್ ತಡೆಗಟ್ಟುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿವೆ. ಈ ಸಂದರ್ಭದಲ್ಲಿ ಪಿಪಿಇ ಕಿಟ್ ಹಾಗೂ ಔಷಧ ಖರೀದಿಯಲ್ಲಿ ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಭ್ರಷ್ಟಾಚಾರ ನಡೆಸಿದ್ದು, ಅವರನ್ನು ಕೂಡಲೇ ಸಂಪುಟ ಸಭೆಯಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದ್ರೇಶ್ ಆಗ್ರಹಿಸಿದ್ದಾರೆ.
ಪಿಪಿಇ ಕಿಟ್ ಹಾಗೂ ಔಷಧ ಖರೀದಿಯಲ್ಲಿ ಭ್ರಷ್ಟಾಚಾರ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರೋಪ - H.S. Sundresh accused
ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಪಿಪಿಇ ಕಿಟ್ ಮತ್ತು ಔಷಧ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದ್ರೇಶ್ ಆರೋಪಿಸಿದ್ದಾರೆ.
![ಪಿಪಿಇ ಕಿಟ್ ಹಾಗೂ ಔಷಧ ಖರೀದಿಯಲ್ಲಿ ಭ್ರಷ್ಟಾಚಾರ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರೋಪ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಂದ್ರೇಶ್](https://etvbharatimages.akamaized.net/etvbharat/prod-images/768-512-7928675-734-7928675-1594116582425.jpg)
ಜೂಮ್ ಆ್ಯಪ್ ಮೂಲಕ ಆನ್ಲೈನ್ ಸುದ್ದಿಗೋಷ್ಠಿ ನಡೆಸಿದ ಅವರು, ಕಳಪೆ ಗುಣಮಟ್ಟದ ಪಿಪಿಇ ಕಿಟ್ಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿ ಭ್ರಷ್ಟಾಚಾರ ನಡೆಸಲಾಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಇದೊಂದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಯಾವ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿದೆಯೋ ಅಲ್ಲಿ ಕೊರೊನಾ ರಣಕೇಕೆ ಹೆಚ್ಚಾಗುತ್ತಿದ್ದು, ಇದು ಬಿಜೆಪಿಯವರಿಗೆ ಜನರ ಮೇಲೆ ಇರುವ ಕಾಳಜಿ ತೋರಿಸುತ್ತದೆ. ಕೂಡಲೇ ಸರ್ಕಾರ ಪ್ರತಿ ಜಿಲ್ಲೆಗಳಿಗೆ ಕನಿಷ್ಠ 20 ಆ್ಯಂಬುಲೆನ್ಸ್ಗಳ ವ್ಯವಸ್ಥೆ ಮಾಡಬೇಕು. ಕೊರೊನಾ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ಇಬ್ಬರೂ ಸಚಿವರನ್ನೂ ಕೂಡಲೇ ವಜಾ ಮಾಡದೆ ಹೊದರೆ ಕಾಂಗ್ರೆಸ್ ಹೋರಾಟ ಮಾಡುತ್ತದೆ ಎಂದರು. ಜನ ಒಟ್ಟಿಗೆ ಸೇರಬಾರದು ಎಂಬ ಕಾರಣಕ್ಕೆ ಇನ್ಮುಂದೆ ಸುದ್ದಿಗೋಷ್ಠಿ ಹಾಗೂ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕವೇ ನಡೆಸಲಾಗುವುದು ಎಂದರು.