ಶಿವಮೊಗ್ಗ: ಕೊರೊನಾ ಲಾಕ್ಡೌನ್ ನಿಂದಾಗಿ ಕಣ್ಣುಗಳ ಸಂಗ್ರಹ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಎರಡು ಸಹ ತೀರ ಕಡಿಮೆಯಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಶೇ. 90ಕ್ಕಿಂತಲು ಕಡಿಮೆಯಾಗಿದೆ. ಕಣ್ಣಿನ ಸಮಸ್ಯೆಯು, ಕಣ್ಣಿನ ಪೊರೆ ಹಾಗೂ ಕಣ್ಣಿನ ಗುಡ್ಡೆಯಿಂದ ಬರುತ್ತದೆ. ಇವುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆ ನಡೆಸಿದರೆ ಯಾವುದೇ ಅಪಾಯದಿಂದ ಕಣ್ಣನ್ನು ರಕ್ಷಿಸಬಹುದಾಗಿದೆ. ಅದರೆ, ನಿರ್ಲಕ್ಷಿಸುವುದರಿಂದ ಸಮಸ್ಯೆ ಮುಂದೆ ಕಂಟಕವಾಗಬಹುದು ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಲಾಕ್ಡೌನ್ ಕ್ಕಿಂತ ಮುಂಚೆ 150ಕ್ಕೂ ಅಧಿಕ ಕಣ್ಣಿನ ಪೊರೆ ಹಾಗೂ ಕಣ್ಣು ಗುಡ್ಡೆಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಆದರೆ, ಲಾಕ್ಡೌನ್ ರಿಲಾಕ್ಸ್ ಆದ ನಂತರ ಇದು ಕೇವಲ ಬೆರಳೆಣಿಕೆಗೆ ಬಂದಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜುಲೈ ತಿಂಗಳಲ್ಲಿ 35, ಆಗಸ್ಟ್ ನಲ್ಲಿ 09 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ, ಸೆಪ್ಟಂಬರ್ ನಲ್ಲಿ ಇದುವರೆಗೂ ಒಂದೂ ಸಹ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿಲ್ಲ.
ಕೋವಿಡ್ ನಿಂದಾಗಿ ಆಸ್ಪತ್ರೆ ಎಂದರೆ ಭಯ ಪಡುತ್ತಿರುವ ಜನ ಶಸ್ತ್ರ ಚಿಕಿತ್ಸೆಗೆ ಮುಂದೆ ಬರುತ್ತಿಲ್ಲ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಅದರಲ್ಲೂ ಮೆಗ್ಗಾನ್ ಆಸ್ಪತ್ರೆಗೆ ಜನ ಬರುವುದು ಕಡಿಮೆಯಾಗಿದೆ. ಕೊರೊನಾ ಲಾಕ್ ಡೌನ್ ನಲ್ಲಿ ನಾನ್ ಕೋವಿಡ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಬದಲಾಯಿಸಲಾಗಿತ್ತು. ನಂತರ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲಾಯಿತು. ಇದರಿಂದ ಹಳೇ ಕಟ್ಟಡವನ್ನು ಪುನಃ ನಾನ್ ಕೋವಿಡ್ ಆಸ್ಪತ್ರೆ ಆಗಿಯೇ ಮುಂದುವರೆಸಲಾಗುತ್ತಿದೆ. ಆದರೂ ಸಹ ಜನ ಆಸ್ಪತ್ರೆ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಇಷ್ಟಾದರೂ ಸಹ ಮೆಗ್ಗಾನ್ ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಿಲ್ಲಿಸಿಲ್ಲ. ಹೊಸ ಹೊಸ ಯಂತ್ರೋಪಕರಣಗಳನ್ನು ತರಿಸಲಾಗಿದೆ. ಇಲ್ಲಿ ಕಾರ್ನಿಯಾ ಸೇರಿದಂತೆ ಇತರೆ ಕಣ್ಣಿನ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಮ್ ರವರು ಹೇಳಿದ್ದಾರೆ.