ಶಿವಮೊಗ್ಗ: ಕಳೆದ ತಿಂಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿದ್ದು, ಶೇಕಡಾ 6.6 ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ತಿಂಗಳು ಕೊರೊನಾ ಪಾಸಿಟಿವ್ ಪ್ರಕರಣಗಳು ಶೇ.25ರಷ್ಟು ಇತ್ತು. ಇದೀಗ ಶೇ.6.6ಕ್ಕೆ ಇಳಿದಿದೆ. ಇದೇ ರೀತಿ, ಕೊರೊನಾ ಸಾವಿನ ಪ್ರಮಾಣದಲ್ಲಿಯೂ ಗಣನೀಯವಾದ ಇಳಿಕೆ ಕಂಡು ಬಂದಿದೆ. ಶೇ.2.5ರಷ್ಟಿದ್ದ ಸಾವಿನ ಪ್ರಮಾಣ ಇದೀಗ 0.9ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ನಿತ್ಯ 2,250 ಕೊರೊನಾ ಪರೀಕ್ಷೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ನಿತ್ಯ 3,500ರಿಂದ 3,800ವರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ದಿನವೂ 4,500ಕ್ಕೂ ಹೆಚ್ಚು ಸ್ಯಾಂಪಲ್ ಸಂಗ್ರಹಿಸಲಾಗುತ್ತಿದೆ ಎಂದರು.
ಪರೀಕ್ಷೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ ಸೋಂಕಿತರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಇದರಿಂದಾಗಿ ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದ್ದು, ಸಾವಿನ ಪ್ರಮಾಣ ಸಹ ಕಡಿಮೆಯಾಗಲು ಮತ್ತು ರೋಗ ಇನ್ನೊಬ್ಬರಿಗೆ ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಇದೂವರೆಗೆ 1.33 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 18,056 ಮಂದಿಗೆ ಪಾಸಿಟಿವ್ ಕಂಡು ಬಂದಿದೆ. ಇವರ ಪೈಕಿ ಪ್ರಸ್ತುತ 1974 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 310 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಇವರ ಪೈಕಿ 240 ಮಂದಿ ಕೊರೊನಾ ಜೊತೆಗೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸಹ ಹೊಂದಿದ್ದರು. 71ಮಂದಿ ಬೇರೆ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಸಾವಿಗೀಡಾದವರಲ್ಲಿ ಬಹುಪಾಲು ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಹೇಳಿದರು.
ಹೋಂ ಕ್ವಾರೆಂಟೈನ್‍ನಲ್ಲಿರುವ 1,333 ಮಂದಿಯನ್ನು ನಿರಂತರವಾಗಿ ನಿಗಾ ವಹಿಸಲು 21ವೈದ್ಯರ ತಂಡಗಳನ್ನು ರಚಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಪ್ರತ್ಯೇಕ ವೈದ್ಯರ ತಂಡಗಳನ್ನು ರಚಿಸಲಾಗಿದೆ. ಈ ತಂಡ ಎರಡು ದಿನಗಳಿಗೊಮ್ಮೆ ಪಾಸಿಟಿವ್ ವ್ಯಕ್ತಿಗಳನ್ನು ಸಂಪರ್ಕಿಸಿ ಆರೋಗ್ಯ ತಪಾಸಣಾ ಕಾರ್ಯ ನಡೆಸುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಆಶಾ ಕಾರ್ಯಕರ್ತೆಯರು ಸಹ ಕೊರೊನಾ ಪೀಡಿತರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದರು.
ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದರೂ ಜನರು ತೀವ್ರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಮಾಸ್ಕ್ ಇಲ್ಲದೇ ಹೊರಗೆ ತೆರಳಬಾರದು. 50ವರ್ಷಕ್ಕಿಂತ ಮೇಲ್ಪಟ್ಟವರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.