ಶಿವಮೊಗ್ಗ:ದೇಶ, ದೇಶ ಎಂದುಕೊಂಡೇ ಹಿಟ್ಲರ್ ಇಡೀ ಜರ್ಮನಿಯನ್ನು ತನ್ನ ಕೈಯಲ್ಲಿಟ್ಟುಕೊಂಡು ಸರ್ವಾಧಿಕಾರ ನಡೆಸಿದ. ಅದೇ ರೀತಿ ಇದೀಗ ಭಾರತದಲ್ಲಿಯೂ ಹಿಟ್ಲರ್ ಮಾದರಿಯ ಆಡಳಿತ ರೂಢಿಯಲ್ಲಿದೆ ಎಂದು ಇತ್ತೀಚೆಗೆ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಸ್ವರಾಜ್ ಇಂಡಿಯಾ ಹಾಗೂ ದಲಿತ ಸಂಘರ್ಷ ಸಮಿತಿಗಳ ಸಹಯೋಗದಲ್ಲಿ ಏರ್ಪಡಿಸಿದ್ದ, ಭಾರತೀಯ ಸಂವಿಧಾನ ಮತ್ತು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಬಡತನ, ನಿರುದ್ಯೋಗ, ಆರ್ಥಿಕ ಕುಸಿತ, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಭೀಕರ ಸಮಸ್ಯೆಗಳು ತಾಂಡವಾಡುತ್ತಿದೆ. ಆದರೆ ದೇಶ ಪ್ರೇಮ, ಧರ್ಮ, ಪೌರತ್ವದ ಮುಂದೆ ಇವೆಲ್ಲವೂ ಗೌಣವಾಗುತ್ತಿವೆ ಎಂದರು. ಸರ್ಕಾರ ನಡೆಸುವವರು ಏನೇ ಮಾಡಿದರೂ ಅದನ್ನು ಜನಸಾಮಾನ್ಯರು ಒಪ್ಪಿಕೊಳ್ಳಬೇಕಾದ ತುರ್ತುಪರಿಸ್ಥಿತಿ ಭಾರತದಲ್ಲಿ ಜಾರಿಯಲ್ಲಿದೆ. ಇದಕ್ಕೆ ಜನರ ಮುಗ್ಧತೆಯೇ ಕಾರಣ ಎಂದರು.
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕುರಿತ ಸಂವಾದ ಕಾರ್ಯಕ್ರಮ 'ಭಾರತವನ್ನು ಒಡೆಯಲು ಸಾಧ್ಯವಿಲ್ಲ'
ಭಾರತದಲ್ಲಿ ಧರ್ಮಗಳನ್ನು ವಿಂಗಡಿಸಿ ಹಿಂದೂ ದೇಶವನ್ನು ಕಟ್ಟಲು ಹುನ್ನಾರ ನಡೆಸುತ್ತಿರುವ ಕೇಂದ್ರ ಸರ್ಕಾರ, ಧರ್ಮಗಳ ಪಟ್ಟಿಯಲ್ಲಿ ಮುಸ್ಲಿಂ ಹೆಸರಿನ ಮೇಲೆ ಗೆರೆ ಎಳೆಯುತ್ತಿದೆ. ದೇಶ ಪ್ರೇಮ, ಗೋ ಹತ್ಯೆಯಂತಹ ವಿಷಯಗಳು ಮುಂಚೂಣಿಗೆ ಬಂದಾಗ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು. ಹೀಗಾಗಿ 370ನೇ ಕಾಯ್ದೆ, ಸಿಎಎ, ಎನ್‌ಆರ್‌ಸಿಯಂತ ಕಾಯ್ದೆಗಳು ಜಾರಿರೂಪ ಪಡೆದುಕೊಳ್ಳುತ್ತಿದ್ದು, ಸಿಎಎನಿಂದ ಕೇವಲ ಮುಸ್ಲೀಮರಿಗೆ ಮಾತ್ರವಲ್ಲ ಭಾರತೀಯರಿಗೂ ಅಪಾಯವಿದೆ ಎಂದರು.
ದೇಶದ ಜನರ ಭಾವನೆಯನ್ನೇ ಆಧಾರವಾಗಿಟ್ಟುಕೊಂಡು ಹೇಗೆ ಸರ್ಕಾರ ನಡೆಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಜನರಲ್ಲಿ ದೇಶಪ್ರೇಮದ ಬಗ್ಗೆ ಭ್ರಮಾಲೋಕವನ್ನೇ ಸೃಷ್ಟಿಸಿದ್ದಾರೆ ಎಂದರು. ಪಾಕಿಸ್ತಾನ, ದೇಶ, ಮುಸ್ಲೀಂ, ಆತಂಕವಾದ ಬಿಟ್ಟರೆ ಬಿಜೆಪಿಗೆ ಬೇರೆ ಏನೂ ಗೊತ್ತಿಲ್ಲ. ಯುದ್ದ ಎಂದರೆ ಪಾಕಿಸ್ತಾನ ಮೇಲೆ ಮಾತ್ರ ಎಂಬಂತಾಗಿದೆ. ಚೀನಾ, ಜಪಾನ್ ಮುಂತಾದ ದೇಶಗಳಿಂದಲೂ ಭಾರತಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ, ಅವುಗಳ ಮೇಲೆ ಯುದ್ಧ ಮಾಡಲಿ ಎಂದು ಕುಟುಕಿದರು.
ಭಾರತದಲ್ಲಿ ದುಡಿಯುವವರು, ಶೋಷಿತರೇ ಹೆಚ್ಚಾಗಿ ಇದ್ದಾರೆ. ಇಂತಹ ದೇಶವನ್ನು ಹೇಗೆ ನಡೆಸಬೇಕು ಎಂಬುದನ್ನು ಗೊತ್ತಿಲ್ಲದ ದಡ್ಡ ಸರ್ಕಾರ ದೇಶದಲ್ಲಿದೆ. ಮನೆಗೆ ಕಳ್ಳರು ನುಗ್ಗದಂತೆ ನೋಡಿಕೊಳ್ಳಬೇಕೇ ಹೊರತು, ನೀವು ಕಳ್ಳರೋ ಅಲ್ಲವೋ ಎಂದು ಸಾಬೀತು ಮಾಡಿ ಎಂದು ಮನೆಯವರಿಗೆ ಹೇಳುವುದು ಸರಿಯಲ್ಲ ಎಂದರು. ಪೌರತ್ವ ವಿಷಯದಲ್ಲೂ ಅದೇ ನಡೆಯುತ್ತಿದೆ. ಬೇರೆ ಧರ್ಮದ ನೆರೆ ರಾಷ್ಟ್ರದವರಿಗೆ ಭಾರತದಲ್ಲಿ ಪೌರತ್ವ ಸಿಗುತ್ತದೆ. ಇಲ್ಲೇ ಹುಟ್ಟಿ ಬೆಳೆದ ಮುಸ್ಲಿಮರಿಗೆ ಪೌರತ್ವ ಕೊಡಲ್ಲ ಅನ್ನುವುದು ಎಷ್ಟರಮಟ್ಟಿಗೆ ಸರಿ? ಎಂದು ಅವರು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಡಿಎಸ್‌ಎಸ್‌ನ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಸ್ವರಾಜ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ. ಶ್ರೀಪಾಲ್, ರೈತ ಮುಖಂಡ ಕಡಿದಾಳು ಶಾಮಣ್ಣ, ಸಾಮಾಜಿಕ ಹೋರಾಟಗಾರ ಪುಟ್ಟಣ್ಣಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.