ಕರ್ನಾಟಕ

karnataka

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸ್ವಕ್ಷೇತ್ರದಲ್ಲೇ ಮುಖಭಂಗ: ಶಿಕಾರಿಪುರದ ತರಲಘಟ್ಟ ಗ್ರಾ.ಪಂಚಾಯತಿ ಕಾಂಗ್ರೆಸ್​ ತೆಕ್ಕೆಗೆ

By ETV Bharat Karnataka Team

Published : Nov 19, 2023, 10:53 AM IST

Setback for BJP President B.Y.Vijayendra: ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮ ಪಂಚಾಯತಿ 30 ವರ್ಷದ ನಂತರ ಕಾಂಗ್ರೆಸ್​ ಪಾಲಾಗಿದೆ.

Congress wins Taralaghatta Gram Panchayat election
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸ್ವಕ್ಷೇತ್ರದಲ್ಲೇ ಮುಖಭಂಗ: ತರಲಘಟ್ಟ ಪಂಚಾಯತಿ ಕಾಂಗ್ರೆಸ್​ ತೆಕ್ಕೆಗೆ

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮ ಪಂಚಾಯತಿಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ಸ್ವಕ್ಷೇತ್ರ ಶಿಕಾರಿಪುರದಲ್ಲೇ ಅವರಿಗೆ ಮುಖಭಂಗವಾಗಿದೆ. ತರಲಘಟ್ಟ ಗ್ರಾಮ ಪಂಚಾಯತಿ 30 ವರ್ಷದ ನಂತರ ಕಾಂಗ್ರೆಸ್​ ತೆಕ್ಕೆ ಸೇರಿದೆ.

ತರಲಘಟ್ಟ ಗ್ರಾಮ ಪಂಚಾಯತಿಯು ಒಟ್ಟು 16 ಗ್ರಾಮ ಪಂಚಾಯತಿ ಸದಸ್ಯರನ್ನು ಒಳಗೊಂಡಿದೆ. ಇದರಲ್ಲಿ ಕಾಂಗ್ರೆಸ್​ ಬೆಂಬಲಿತ 8 ಹಾಗೂ ಬಿಜೆಪಿ ಬೆಂಬಲಿತ 8 ಸದಸ್ಯರು ಇದ್ದಾರೆ. ಶನಿವಾರ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್​ನಿಂದ ಅಧ್ಯಕ್ಷ ಸ್ಥಾನಕ್ಕೆ ಮಂಜಮ್ಮ ಜ್ಞಾನೇಶ್​ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕುಮಾರ ನಾಯಕ್​ ತಿಮ್ಲಾಪುರ ಹಾಗೂ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರೂಪಾ ಸತೀಶ್​ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೂದ್ಯಾ ನಾಯ್ಕ ಸ್ಪರ್ಧಿಸಿದ್ದರು.

ಇವರಲ್ಲಿ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಮಂಜಮ್ಮ ಜ್ಞಾನೇಶ್​ ಹಾಗೂ ಕುಮಾರ ನಾಯಕ್​ ತಿಮ್ಲಾಪುರ ತಲಾ 16 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ ಒಂದೊಂದು ಮತ ಅಂದರೆ, ಸ್ಪರ್ಧಿಗಳು ತಮ್ಮ ಮತವನ್ನು ತಮಗೆ ಚಲಾಯಿಸಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್​ ತರಲಘಟ್ಟ ಗ್ರಾಮ ಪಂಚಾಯತಿಯನ್ನು 30 ವರ್ಷದ ನಂತರ ಬಹುಮತದೊಂದಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅದರಲ್ಲೂ, ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಸಹ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿರುವುದು ಸೋಜಿಗದ ವಿಷಯ.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರಾದ ನಾಗರಾಜ ಗೌಡ, ರಾಘವೇಂದ್ರ ನಾಯಕ್ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಾಂಗ್ರೆಸ್​ಗೆ ಬೆಂಬಲ ಸೂಚಿಸಿರುವ ಕುರಿತು ಪ್ರತಿಕ್ರಿಯಿಸಿದ ನೂತನ ಉಪಾಧ್ಯಕ್ಷ ಕುಮಾರ್ ನಾಯಕ್ ತಿಮ್ಲಾಪುರ, "ಬಿಜೆಪಿಯವರು ಅಭ್ಯರ್ಥಿಗಳನ್ನು ನೋಡಿ ಮತ ಚಲಾಯಿಸಿದ್ದಾರೆ. ಅವರಿಗೂ ಅಭಿವೃದ್ಧಿ ಬೇಕಾಗಿದೆ. ಹಿಂದಿನವರು ಸರಿಯಾಗಿ ಕೆಲಸ ಮಾಡದ ಕಾರಣ ನಮಗೆ ಬೆಂಬಲ ನೀಡಿದ್ದಾರೆ" ಎಂದು ಹೇಳಿದರು.

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಅವರದ್ದೇ ಕ್ಷೇತ್ರದ ಗ್ರಾಮ ಪಂಚಾಯತಿನಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಇದರ ನಡುವೆ ಹಲವು ನಾಯಕರ ಹೆಸರುಗಳು ಮುಂಚೂಣಿಗೆ ಬಂದಿದ್ದವು. ನವೆಂಬರ್​ 10ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ದಕ್ಷಿಣ ಕನ್ನಡ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್​ ಇದುವರೆಗೆ ರಾಜ್ಯಾಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನವೇ ಪೂರ್ಣಗೊಂಡಿತ್ತು.

ಇದನ್ನೂ ಓದಿ:ವಿಜಯೇಂದ್ರ ಕರ್ನಾಟಕ ಬಿಜೆಪಿಯ ನೂತನ ಸಾರಥಿ: ಮೋದಿ, ಶಾ, ಸಂತೋಷ್​ಗೆ ಧನ್ಯವಾದ ಹೇಳಿದ BYV​​​​​​

ABOUT THE AUTHOR

...view details