ಸಾದ್ವಿ ಪ್ರಜ್ಞಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಕಾಂಗ್ರೆಸ್ ದೂರು ಶಿವಮೊಗ್ಗ :ಹಿಂದೂ ಜಾಗರಣ ವೇದಿಕೆಯ ವತಿಯಿಂದ ನಡೆದ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರಚೋದನಕಾರಿ ಮಾತುಗನ್ನಾಡಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ವಿಶ್ಲೇಷಕ ತೆಹಸೀನ್ ಪೂನಾವಾಲಾ ಅವರು ಎಸ್‌ಪಿ ಮಿಥುನ್‌ಕುಮಾರ್ ಅವರಿಗೆ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದರು.
ಆದರೆ ಕೋಟೆ ಪೊಲೀಸರು ಇಂದು ಹನ್ನೊಂದು ಗಂಟೆಯೊಳಗೆ ಬಂದು ದೂರು ನೀಡುವಂತೆ ನೋಟಿಸ್ ನೀಡಿದ್ದರು. ಹಾಗಾಗಿ ಅವರ ಪರವಾಗಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎಫ್ ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.
ಸಾದ್ವಿ ಪ್ರಜ್ಞಾ ಹೇಳಿದ್ದೇನು?: 'ಲವ್ ಜಿಹಾದ್ ಮಾಡುವವರಿಗೆ ಲವ್ ಜಿಹಾದ್ ಮೂಲಕ ಉತ್ತರ ಕೊಡಿ. ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಸಿದ್ಧವಾಗಿಡಿ. ಯಾವಾಗ ಸಮಯ ಬರುತ್ತೋ ಗೊತ್ತಿಲ್ಲ. ಆತ್ಮ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ಹರ್ಷ ಸೇರಿದಂತೆ ಹಲವರ ಮೇಲೆ ನಡೆದ ದಾಳಿ ನಮ್ಮ ಮೇಲೂ ಆಗಬಹುದು. ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬುಗಳಂತೆ ಸಿದ್ಧಪಡಿಸಬೇಕು' ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದರು.
ಹೆಣ್ಣು ಮಕ್ಕಳ ಮರ್ಯಾದೆಗೆ ಬಂದರೆ ತಿರುಗಿ ಬೀಳಬೇಕಿದೆ. ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ನಮ್ಮ ಕುಟುಂಬದ, ನಮ್ಮ ಪ್ರದೇಶದ ಹಾಗೆ ದೇಶದ ರಕ್ಷಣೆಗೆ ಸಿದ್ಧರಾಗಬೇಕು. ಆಯುಧ ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನುಬಾಹಿರ ಇರಬಹುದು. ಆದರೆ, ಆತ್ಮರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಅಗತ್ಯ ಬಿದ್ದರೆ ಆಯುಧಗಳಿಗೆ ಪರವಾನಿಗೆಯನ್ನು ಇಟ್ಟುಕೊಳ್ಳಿ ಎಂದರು. ಧರ್ಮದ ಪಕ್ಷದಲ್ಲಿದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ. ಈ ಕಾರಣಕ್ಕಾಗಿ 9 ವರ್ಷಗಳ ಕಾಲ ಹಾಸಿಗೆಯಲ್ಲಿ ಇದ್ದವಳು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ :ಹಿಂದೂ ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬ್ ರೀತಿ ಸಿದ್ಧಗೊಳಿಸಿ: ಸಾಧ್ವಿ ಪ್ರಜ್ಞಾಸಿಂಗ್ ಕರೆ