ಶಿವಮೊಗ್ಗ: ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗದಿಂದ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಸಮಾವೇಶ ನಡೆಸಿದೆ. ನಗರದ ಸೈನ್ಸ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಹಾಲಿ ಹಾಗೂ ಮಾಜಿ ಶಾಸಕರುಗಳು ಭಾಗಿಯಾಗಿದ್ದರು.
ಸಮಾವೇಶದಲ್ಲಿ ಮಾತನಾಡಲು ಸಿದ್ದರಾಮಯ್ಯ ಸ್ಟೇಜ್ಮೇಲೆ ಬರುತ್ತಿದ್ದಂತೆ ಟಗರು ಸಾಂಗ್ ಹಾಕಲಾಯಿತು. ಈ ವೇಳೆ ಸಿದ್ದರಾಮಯ್ಯ ನಗುಮುಖದಿಂದಲೇ ಜನರಿಗೆ ಕೈ ಬೀಸಿದರು. ನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದರು. ನಾವು ಅಧಿಕಾರಕ್ಕೆ ಬರ್ತಿವಿ, ಬಿಜೆಪಿ ಸರ್ಕಾರ ಯಾವಾಗ ಬೇಕಾದ್ರು ಬಿದ್ದು ಹೋಗಬಹುದು.ಇದರಿಂದ ಪೊಲೀಸರೇ ಎಚ್ಚರದಿಂದ ಇರಬೇಕು. ಸರ್ಕಾರ ರಚನೆ ಮಾಡಲು ಹಣ ನೀಡಿದಾಗ ಆತ್ಮಸಾಕ್ಷಿ ಇದ್ದರೆ ಅದನ್ನು ಪೊಲೀಸರು ತಡೆಯಬೇಕಿತ್ತು ಎಂದರು.
ಪೊಲೀಸರಿಗೆ ಮಾನ ಮರ್ಯಾದೆ ಇದೆಯೇ?
ಬಿಜೆಪಿ ನಾಯಕರುಗಳು ಅಕ್ರಮವಾಗಿ ಆಸ್ತಿ ಮಾಡಿದಾಗ ಅದನ್ನು ತಡೆಯಬಹುದಾಗಿತ್ತು. ಪೊಲೀಸರೆ ನಿಮಗೆ ಈಶ್ವರಪ್ಪ ತನ್ನ ಮನೆಯಿಂದ ಹಣ ತಂದು ನಿಮಗೆ ಸಂಬಳ ನೀಡಲ್ಲ, ನಿಮಗೆ ಜನರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತದೆ ಎಂದರು.ನಾವು ಅಧಿಕಾರದಲ್ಲಿದ್ದಾಗ ಯಾರನ್ನು ದುರುಪಯೋಗ ಮಾಡಿ ಕೊಂಡಿಲ್ಲ. ಪೊಲೀಸರೆ ಮೊದಲು 307 ಅಂದ್ರೆ ಏನೂ ಅಂತ ತಿಳಿದು ಕೊಳ್ಳಬೇಕಿತ್ತು. ಭದ್ರಾವತಿ ಘಟನೆಯಲ್ಲಿ ಪೊಲೀಸರು 323 ಹಾಕಬಹುದಾಗಿತ್ತು. ಹಲ್ಲೆ ನಡೆಸಿದ ಬಗ್ಗೆ ನೀವು ವೈದ್ಯರ ಸರ್ಟಿಫಿಕೇಟ್ ತೆಗದುಕೊಂಡು ಕೇಸು ಹಾಕಿದ್ರಾ?. ಪೊಲೀಸರಿಗೆ ಮಾನಮರ್ಯಾದೆ, ಆತ್ಮಸಾಕ್ಷಿ ಇದೆಯೇ ಎಂದು ಕಿಡಿಕಾರಿದರು.
ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಅಧಿಕಾರ ಮಾಡ್ತಾ ಇದ್ದೀರಾ, ಲೂಟಿ ಮಾಡುವುದು ಬಿಟ್ಟು ಏನಾದ್ರೂ ಮಾಡಿದ್ದೀರಾ? ಎಂದರು. ಯಡಿಯೂರಪ್ಪ ಹಾಗೂ ಈಶ್ವರಪ್ಪ ಆಸ್ತಿ ಮಾಡುವುದರಲ್ಲಿ ಕಾಂಪಿಟೇಷನ್ ಮಾಡ್ತಾ ಇದ್ದಾರೆ. ಹಸಿರು ಟವಲ್ ಹಾಕಿಕೊಂಡು ರೈತರ ಮೇಲೆ ಗೋಲಿಬಾರ್ ನಡೆಸಿದ್ರು ಕೂಡ ನಿಮಗೆ ನಾಚಿಕೆ ಆಗೋದಿಲ್ಲವೆ? ಎಂದು ಪ್ರಶ್ನಿಸಿದರು.