ಶಿವಮೊಗ್ಗ: ಪುತ್ರಿ ಡಾ.ರಾಜನಂದಿನಿ ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಡಾ.ರಾಜನಂದಿನಿ ಬಿಜೆಪಿ ಸೇರ್ಪಡೆ ಆಗಿರುವ ಸುದ್ದಿ ನನಗೆ ಈಗಷ್ಟೇ ಗೊತ್ತಾಗಿದೆ. ಅವಳು ಈ ರೀತಿ ಮಾಡುತ್ತಾಳೆ ಎಂದು ನಾನು ಕನಸಿನಲ್ಲೂ ಆಲೋಚಿಸಿರಲಿಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕರೂ ಆಗಿರುವ ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ರಾಜಕಾರಣದಲ್ಲಿ ಸ್ಥಿರತೆ ಮತ್ತು ಬದ್ಧತೆ ಉಳಿಸಿಕೊಂಡು ಬಂದವನು. ನಾವು ಅದನ್ನು ಅನುಸರಿಸುತ್ತಿದ್ದೇವೆ ಕಾರ್ಯರೂಪಕ್ಕೆ ತರುತ್ತಿದ್ದೇವೆ. ಆ ಸಂತೋಷ ಮತ್ತು ನೆಮ್ಮದಿ ನನಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಸೇರಿರುವಂತಹದ್ದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ ಎಂದರು. ಡಾ.ರಾಜನಂದಿನಿ ಈ ಕೆಲಸ ಮಾಡಬಾರದಿತ್ತು. ಇದು ನನ್ನ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು. ಅದೇನಿದ್ದರೂ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ. ನಾನು ಕಾಂಗ್ರೆಸ್ ಪರವಾಗಿ ನಿಲ್ಲುತ್ತೇನೆ. ಕಾಂಗ್ರೆಸ್ ಪರವಾಗಿಯೇ ಇರುತ್ತೇನೆ ಎಂದರು.
ಡಾ.ರಾಜನಂದಿನಿ ಬಿಜೆಪಿ ಸೇರ್ಪಡೆ ಹಿಂದೆ ಹಾಲಪ್ಪನವರ ಕೈವಾಡ ಇದೆ ಎಂದು ಆರೋಪಿಸಿದ ಅವರು, ಮಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇನೆ. ಅವಳ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವಳು ತನ್ನ ಬೇಸರವನ್ನು ನನ್ನ ಬಳಿ ಹೇಳಿಕೊಂಡಿಲ್ಲ ಎಂದರು. ನಾನು ಅವಳನ್ನು ಮಲ್ಲಿಕಾರ್ಜುನ ಖರ್ಗೆ ಬಳಿ ಕರೆದುಕೊಂಡು ಹೋಗಿದ್ದೆ. ಅವಕಾಶ ಇದ್ದರೆ ನೋಡೋಣ ಅಂದಿದ್ದರು. ರಾಜಕೀಯವಾಗಿ ಬೆಳೆಯುವಂಥದ್ದನ್ನು ಕಾಂಗ್ರೆಸ್ ನಲ್ಲೇ ಇದ್ದು ಮಾಡಬಹುದಿತ್ತು. ನನ್ನ ಹತ್ತಿರ ಅವಳು ಏನನ್ನೂ ಹೇಳಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಡಾ.ರಾಜನಂದಿನಿ ಜೊತೆ ಆನಂದಪುರಂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹುನಗೋಡು ರತ್ನಾಕರ್ ರವರು ಸಹ ಬಿಜೆಪಿ ಸೇರ್ಪಡೆಯಾಗಿದ್ದಾರೆ.