ಶಿವಮೊಗ್ಗ: ಕೊರೊನಾ ವೈರಸ್ ಅನ್ನು ಚೀನಾ ಭಾರತಕ್ಕೆ ತಂದಿದ್ರೆ, ಕಾಂಗ್ರೆಸ್ ಅದನ್ನು ಭಾರತದಲ್ಲಿ ಮುಂದುವರೆಯುವಂತೆ ಮಾಡುತ್ತಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಕೊರೊನಾ ಇಷ್ಟೊಂದು ಏರಿಕೆ ಆಗಲು ಕಾಂಗ್ರೆಸ್ ಕಾರಣ. ಮೊದಲು ವ್ಯಾಕ್ಸಿನ್ ಬಂದಾಗ ವ್ಯಾಕ್ಸಿನ್ ತೆಗೆದುಕೊಳ್ಳದಂತೆ ಕಾಂಗ್ರೆಸ್ ಜನರಲ್ಲಿ ಬೆದರಿಕೆ ಹುಟ್ಟಿಸಿತು. ಇದರಿಂದ ಜನ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದೇಟು ಹಾಕಿದರು. ಇದು ಕೊರೊನಾ ಜಾಸ್ತಿ ಆಗಲು ಕಾರಣವಾಯ್ತು ಎಂದು ಅವರು ಆರೋಪಿಸಿದರು.
ಕೊರೊನಾ ಲಸಿಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲು ಹಾಕಿಸಿಕೊಳ್ಳದೆ ವಾರಿಯರ್ಸ್ಗೆ ಹಾಕಿಸಿದರು. ಲಸಿಕೆಯ ಕುರಿತು ಮೊದಲು ಕಾಂಗ್ರೆಸಿಗರೇ ಅಪಪ್ರಚಾರ ನಡೆಸಿದ್ದಾರೆ. ಲಸಿಕೆ ತೆಗೆದುಕೊಂಡರೆ ಪುರುಷರ ಪೌರುಷತ್ವ ಹೊರಟು ಹೋಗುತ್ತದೆ ಎಂದು ಅಪ್ರಚಾರ ನಡೆಸಿದರು. ಮುಸ್ಲಿಂರಿಗೆ ಮಕ್ಕಳಾಗಬಾರದೆಂದು ಈ ಲಸಿಕೆ ಹೊರತಂದಿದ್ದಾರೆ ಎಂದು ಯು.ಟಿ. ಖಾದರ್ ಹೇಳಿದ್ದರು. ಯಾಕೆ ಇವರೆಲ್ಲಾ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ದೆಹಲಿಯಲ್ಲಿ ಬಡವರ ಮೇಲೆ ಲಸಿಕೆ ಪ್ರಯೋಗ ಮಾಡಲು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದರು. ಜನರ ಸಾವಲ್ಲ, ಕೊಲೆ. ಈ ಕೊಲೆಗೆ ಕಾಂಗ್ರೆಸ್ ಕಾರಣವಾಗಿದೆ ಎಂದರು. ಈಗ ಲಸಿಕೆ ಇಲ್ಲ ಎಂದು ಕಾಂಗ್ರೆಸ್ ಆರೋಪ ಮಾಡ್ತಾ ಇದೆ. ಇದು ಕಾಂಗ್ರೆಸ್ಸಿನ ದ್ವಂದ್ವ ನೀತಿಗೆ ಉದಾಹರಣೆ ಎಂದರು.
ಸಿದ್ದರಾಮಯ್ಯನವರಿಗೂ, ನಮಗೂ ಒಂದೇ ಕಾನೂನು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತಮಗೆ ಕೊರೊನಾದ ಬಗ್ಗೆ ಮಾಹಿತಿ ಪಡೆಯಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಾನು ಪರಿಷತ್ನ ವಿರೋಧ ಪಕ್ಷದ ನಾಯಕನಾಗಿದ್ದಾಗ ರಾಜ್ಯದಲ್ಲಿ ಬಂದಿದ್ದ ಬರ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಡಿಸಿಗಳಿಗೆ ಮಾಹಿತಿ ಕೇಳಿದ್ರೆ, ಮಾಹಿತಿ ನೀಡಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂದು ಡಿಸಿಗಳು ಹೇಳಿದ್ರು. ನಾನು ಆಯಾ ಜಿಲ್ಲೆಗೆ ಹೋದಾಗ ಐಬಿಗಳಲ್ಲಿ ಅಧಿಕಾರಿಗಳಿಂದ ಅನೌಪಚಾರಿಕವಾಗಿ ಮಾಹಿತಿ ಪಡೆದುಕೊಂಡಿದ್ದೆ. ಬಿಜೆಪಿಗೆ ಒಂದು ಸಂವಿಧಾನ, ಕಾಂಗ್ರೆಸ್ಗೆ ಒಂದು ಸಂವಿಧಾನ ಇದೆಯೇ ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ್ದಾರೆ. ಈಗಲಾದರೂ ವಿರೋಧ ಪಕ್ಷದವರು ಟೀಕೆ ಮಾಡುವುದನ್ನು ಬಿಡಬೇಕೆಂದು ಎಂದು ಮನವಿ ಮಾಡುವುದಾಗಿ ತಿಳಿಸಿದರು.