ಶಿವಮೊಗ್ಗ:ಕಾಂಗ್ರೆಸ್ ಸೋಲುತ್ತಿರುವುದು ಇವಿಎಂನಿಂದ ಅಲ್ಲ. ಅವರು ಸೋಲುತ್ತಿರುವುದು ಜನರ ಸಂಕಲ್ಪದಿಂದ ಎಂದು ಬಿಜೆಪಿಯ ರಾಷ್ಟ್ರೀಯ ಯುವ ಮೂರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಫ್ರಿಢಂ ಪಾರ್ಕ್ ನಲ್ಲಿ ನಡೆದ ಬಿಜೆಪಿಯ ಜಿಲ್ಲಾ ಯುವ ಮೋರ್ಚಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ನವರು ಈಗ ಗುಜರಾತ್ ಚುನಾವಣೆಗೆ ಬಳಸಿದ ಇವಿಎಂ ಅನ್ನು ನಮ್ಮ ರಾಜ್ಯಕ್ಕೆ ತರಬೇಡಿ ಎಂದು ಹೇಳುತ್ತಿದ್ದಾರೆ. ಅವರಿಗೆ ಇವಿಎಂ ಮೇಲೆ ಭಯ ಪ್ರಾರಂಭವಾಗಿದೆ. ಆದರೆ ಕಾಂಗ್ರೆಸ್ ನವರು ಸೋಲುತ್ತಿರುವುದು ಇವಿಎಂನಿಂದ ಅಲ್ಲ, ಜನರನ್ನು ನಿಮ್ಮನ್ನು ಸೋಲಿಸಲು ತೆಗೆದುಕೊಂಡ ಸಂಕಲ್ಪದಿಂದ ಎಂದರು.
ಶಿವಮೊಗ್ಗಕ್ಕೆ ಪ್ರತಿ ಬಾರಿಯೂ ಬಂದಾಗ ಖುಷಿ ಆಗುತ್ತದೆ. ಜಿಲ್ಲೆಯ ಯುವಮೋರ್ಚಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಚುನಾವಣೆ ಪ್ರಾರಂಭವಾದಾಗ ಕಾಂಗ್ರೆಸ್ ಜೆಡಿಎಸ್ ಹುಟ್ಟಿಕೊಳ್ಳುತ್ತವೆ. ಆಗ ಮಾತ್ರ ಇವು ಆ್ಯಕ್ಟಿವ್ ಆಗುತ್ತವೆ. ಆದರೆ ಲಾಕ್ ಡೌನ್ ನಲ್ಲೂ ಸಹ ನಮ್ಮ ಯುವ ಮೋರ್ಚಾ ಕಾರ್ಯಕರ್ತರು ಬೀದಿಯಲ್ಲಿದ್ದರು. ಪಂಚ ರತ್ನಯಾತ್ರೆ ಅಂತ ಬರುವವರಲ್ಲ ನಾವು ವರ್ಷವಿಡಿ ಕೆಲಸ ಮಾಡುವ ಪಾರ್ಟಿ ಎಂದು ತಿಳಿಸಿದರು.
ಯಡಿಯೂರಪ್ಪ ಸರ್ಕಾರ ಬೆಂಗಳೂರು ಹೊರತುಪಡಿಸಿ ಜಿಲ್ಲೆಗಳ ಅಭಿವೃದ್ದಿ ಮಾಡಿಸಿತು. ನಾಳೆ ಪಿಎಂ ಬರುತ್ತಾರೆ. ಪ್ರತಿ 200 ಕಿ ಮೀ ದೂರದಲ್ಲಿ ವಿಮಾನ ನಿಲ್ದಾಣ ಇರುವ ಏಕೈಕ ರಾಜ್ಯ ಅಂದ್ರೆ ನಮ್ಮ ಕರ್ನಾಟಕ ಎಂದರು. ಎಲ್ಲಿ ನೋಡಿದ್ರು ಹೈವೇ ಕೆಲಸ ನಡೆಯುತ್ತಿದೆ. ಬೆಂಗಳೂರು ಮೈಸೂರು ಹೈವೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ನಮ್ಮ ಕನಸು ಎನ್ನುತ್ತಿದ್ದಾರೆ. ಆದರೆ ನಮ್ಮ ಡಬಲ್ ಎಂಜಿನ್ ಸರ್ಕಾರ ಕನಸನ್ನು ನನಸು ಮಾಡಿದ್ದು ಎಂದು ಕಾಂಗ್ರೆಸ್, ಜೆಡಿಎಸ್ಗೆ ಟಾಂಗ್ ನೀಡಿದರು. ಶಂಕುಸ್ಥಾಪನೆ, ಲೋಕಾರ್ಪಣೆ ಮಾಡುವುದು ನಮ್ಮಸರ್ಕಾರವೇ ಎಂದರು.