ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಧರ್ಮದ ವಿಷಬೀಜ ಬಿತ್ತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.. ಸರ್ಕಾರ ಬಹಳ ದಿನ ಉಳಿಯಲ್ಲ: ಬಿಎಸ್​ವೈ - ಧರ್ಮದ ವಿಷಬೀಜ ಬಿತ್ತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ

ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ನಾವೆಲ್ಲಾ ಒಂದಾಗಿ ಪ್ರಯತ್ನ ಮಾಡಿದರೆ ಬದಲಾವಣೆ ತರಲು ಸಾಧ್ಯ. ಕಾಂಗ್ರೆಸ್‌ಗೆ ನೀಡಿದ ಭರವಸೆಗಳನ್ನು ಈಡೇರಿಸುವ ಶಕ್ತಿ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Etv Bharatformer-cm-bs-yeddyurappa-says-congress-government-will-not-last-long
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯುವುದಿಲ್ಲ: ಬಿ.ಎಸ್.ಯಡಿಯೂರಪ್ಪ

By

Published : Jun 18, 2023, 10:33 PM IST

Updated : Jun 18, 2023, 11:05 PM IST

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ:ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ 9 ವರ್ಷದ ಸಾಧನೆಗಳನ್ನು ತಿಳಿಸುವ ಜನಸಭಾ - ಸಾರ್ವಜನಿಕ ಸಭೆಯನ್ನು ನಗರದ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕೊಟ್ಟಿರುವ ಸುಳ್ಳು ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರುವಂತೆ ನಾವು ಒತ್ತಡವನ್ನು ಹೇರಬೇಕಿದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗುತ್ತದೆ ಎಂದು ನಾವು ಊಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಜನರಿಗೆ ವಾಸ್ತವ ಸಂಗತಿಗಳು ಅರಿವಾಗುತ್ತವೆ. ಕಾಂಗ್ರೆಸ್‌ಗೆ ನೀಡಿದ ಭರವಸೆಗಳನ್ನು ಈಡೇರಿಸುವ ಶಕ್ತಿ ಇಲ್ಲ. ಈ ಎಲ್ಲ ಭರವಸೆಗಳು ತಾತ್ಕಾಲಿಕವಾದವುಗಳಾಗಿವೆ. ಬಿಜೆಪಿ ಸರ್ಕಾರ ರೈತರಿಗೆ ಉಚಿತ ವಿದ್ಯುತ್, ಭಾಗ್ಯಲಕ್ಷ್ಮೀ, ಹಾಲು ಉತ್ಪಾದಕರಿಗೆ ಸಹಾಯಧನದಂತಹ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಕಾಂಗ್ರೆಸ್ ಧರ್ಮದ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.

ಮುಂದೆ ಬರಲಿರುವ ಎಲ್ಲ ಚುನಾವಣೆಗಳಲ್ಲಿ ನಾವು ಒಟ್ಟಾಗಿ ಹೋರಾಡಬೇಕು. ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿ ಗೆಲುವು ಸಾಧಿಬೇಕು. ವಿಧಾನಸಭೆಯಲ್ಲಿ ಸೋತಿದ್ದೇವೆ ಎಂದು ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ನಾವೆಲ್ಲಾ ಒಂದಾಗಿ ಪ್ರಯತ್ನ ಮಾಡಿದರೆ ಬದಲಾವಣೆ ತರಲು ಸಾಧ್ಯ. ಜಿಲ್ಲೆಯ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸೋಣ. ನಮ್ಮ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಜನ ಮರೆತಿಲ್ಲ. ಆಡಳಿತ ಪಕ್ಷದ ಹುಳುಕನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರೋಣ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡೋಣ ಎಂದು ಬಿಎಸ್​ವೈ ಕರೆ ನೀಡಿದರು.

ಸೋಲು ಒಂದು ಆಕಸ್ಮಿಕ: ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಇಂದು ಮತೀಯ ಶಕ್ತಿಗಳ ಕೈವಶವಾಗಿದೆ. ಆದ್ದರಿಂದಲ್ಲೇ ಮತಾಂತರ ನಿಷೇಧ ಕಾಯಿದೆಯನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆ. ವಂಚನೆಯ ಮತಾಂತರ, ಲವ್ ಜಿಹಾದ್ ಮತ್ತು ಗೋಹತ್ಯೆಗೆ ಅವಕಾಶ ನೀಡಬೇಕು ಎಂಬುದು ಸಿದ್ದರಾಮಯ್ಯ ಸರ್ಕಾರದ ಕನಸಾಗಿದೆ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆಯ ಸೋಲು ಒಂದು ಆಕಸ್ಮಿಕ ಮಾತ್ರ. ಜನ ಕಾಂಗ್ರೆಸ್‌ನ ವಂಚನೆ, ಸುಳ್ಳಿಗೆ ಮಾರು ಹೋಗಿದ್ದಾರೆ. ಈ ಕಾರ್ಯಕ್ರಮ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ದತೆ ಎನ್ನುವಂತಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆ, ರಾಮ ಮಂದಿರ ನಿರ್ಮಾಣ, ಕಲಂ 370 ರದ್ದು ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದೊಡ್ಡ ಸಾಧನೆ. ಈ ಮೂಲಕ ಸಮರ್ಥ, ಸದೃಢ ಭಾರತ ನಿರ್ಮಿಸಿದ್ದೇವೆ ಎಂದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನರೇಂದ್ರ ಮೋದಿಯವರ ಸಾಧನೆ ಬಗ್ಗೆ ಹೇಳುವ ಅಗತ್ಯವಿಲ್ಲ. ಮೋದಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಇಂದು ವಿಶ್ವವೇ ಮೋದಿ ಅವರನ್ನು ಕೊಂಡಾಡುತ್ತಿದೆ. ನಮ್ಮಲ್ಲಿ ಯಾವ ಚುನಾವಣೆ ಬಂದರೂ ನಾವು ಸಿದ್ದರಿದ್ದೇವೆ ಎನ್ನುವ ಕಾರ್ಯಕರ್ತರ ಪಡೆ ಇದೆ. ಜನ ಒಮ್ಮೆ ಮೋಸ ಹೋಗಿದ್ದಾರೆ. ಮತ್ತೊಮ್ಮೆ ಮೋಸ ಹೋಗುವುದಿಲ್ಲ. ದೇಶ, ಧರ್ಮ ರಕ್ಷಣೆ ಮಾಡಲು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ ಎಂದು ಕರೆ ನೀಡಿದರು.

ಪ್ರಮೋದ್ ಮಧ್ವರಾಜ್ ಮಾತನಾಡಿ, ನಾವು ಸೋತಿದ್ದೇವೆ ಎಂಬ ಚಿಂತೆ ಬೇಡ. ಮರದಿಂದ ಉದುರಿದ ಹಣ್ಣು ಮೊಳಕೆಯೊಡೆದು ಮರವಾಗಿ ಬೆಳೆದು ನೂರಾರು ಹಣ್ಣು ನೀಡುವಂತೆ ಮತ್ತೆ ನಾವು ಪುಟಿದೇಳುತ್ತೇವೆ. ಯಾರನ್ನು ಬೇಕಾದರೂ ಸೋಲಿಸುತ್ತೇವೆ ಎಂಬುದನ್ನು ಬಿಜೆಪಿ ಕಾರ್ಯಕರ್ತರು ತೋರಿಸಿದ್ದಾರೆ. ಮುಂದಿನ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಬಲವಗಿ ಸಂಘಟಿಸೋಣ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಶಾಸಕರಾದ ಬಿ.ವೈ.ವಿಜಯೇಂದ್ರ, ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಪರಿಸ್ಥಿತಿ ಹೇಗಿರಲಿದೆ ಎಂದು ಕಾದು ನೋಡಿ: ವಿಜಯೇಂದ್ರ

Last Updated : Jun 18, 2023, 11:05 PM IST

ABOUT THE AUTHOR

...view details