ಕರ್ನಾಟಕ

karnataka

ETV Bharat / state

ಸಚಿವ ಮಧು ಬಂಗಾರಪ್ಪ ವಿರುದ್ಧ ಕಾರ್ಯಕರ್ತರ ಅಸಮಾಧಾನ: ಕೈ ಮುಖಂಡರನ್ನು ಸಮಾಧಾನ ಮಾಡಿದ ಜಿಲ್ಲಾಧ್ಯಕ್ಷರು

ಶಿಕಾರಿಪುರ ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಉದ್ಘಾಟನೆ ಸಮಾರಂಭ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಆಗಮಿಸದ ಹಿನ್ನೆಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

Minister Madhu Bangarappa
ಸಚಿವ ಮಧು ಬಂಗಾರಪ್ಪ

By ETV Bharat Karnataka Team

Published : Sep 7, 2023, 7:17 AM IST

ಶಿವಮೊಗ್ಗ :ಸಚಿವ ಮಧು ಬಂಗಾರಪ್ಪ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು. ಶಿಕಾರಿಪುರ ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆದರೆ, ಶಿಕಾರಿಪುರಕ್ಕೆ ಬಂದರೂ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸದೇ ಮಧು ಬಂಗಾರಪ್ಪ ಹಾಗೆಯೇ ತೆರಳಿದ್ದರಿಂದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷರಾದ ಹೆಚ್ಎಸ್ ಸುಂದರೇಶ್ ಅವರ ಎದುರಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು.

ಪಕ್ಷದ ಕಚೇರಿ ಉದ್ಘಾಟನೆ ನಡೆಯುತ್ತಿರುವ ವಿಚಾರ ತಿಳಿದಿದ್ದರೂ ಕೂಡ ಇದೇ ಮಾರ್ಗದಲ್ಲಿ ಸಂಚರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ಅವರನ್ನು ಕಾರ್ಯಕರ್ತರು ಪರಿಪರಿಯಾಗಿ ಬೇಡಿಕೊಂಡರೂ ಸಹ ಕಾರಿನಿಂದ ಇಳಿಯದೇ ಹಾಗೆ ಹೋಗುವ ಮೂಲಕ ನೋವುಂಟು ಮಾಡಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮರ್ ಅವರು ಕಾಗೋಡು ತಿಮ್ಮಪ್ಪ, ಮತ್ತು ಜಿಲ್ಲಾಧ್ಯಕ್ಷ ಸುಂದರೇಶ್ ಎದುರು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸುಂದರೇಶ್, ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಿವಮೊಗ್ಗದಲ್ಲಿ ತುರ್ತು ಸಭೆ ಇರುವುದರಿಂದ ಹಾಗೆ ಹೋಗಿದ್ದಾರೆ. ಇಲ್ಲಿ ಯಾವುದೇ ಬಣ ರಾಜಕೀಯ ಬೇಡ. ಏನಿದ್ದರೂ ಕುಳಿತು ಮಾತನಾಡಿ ಸರಿ ಮಾಡಿಕೊಳ್ಳೋಣ, ಸಚಿವರು ಶಿವಮೊಗ್ಗದ ಕಾಡಾ ಕಚೇರಿಯಲ್ಲಿ ನಡೆಯುವ ಐಸಿಸಿ ಸಭೆಗೆ ಹೋಗಲೇಬೇಕಾದ ಕಾರಣ ತೆರಳಿದ್ದಾರೆ. ಈ ಕುರಿತು ನನಗೆ ಫೋನ್​ನಲ್ಲಿ ಮಾಹಿತಿ ನೀಡಿ ಹೋಗಿದ್ದಾರೆ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

ಇದನ್ನೂ ಓದಿ :ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ನಾಲ್ಕೈದು ದಿನಗಳಲ್ಲಿ ತೀರ್ಮಾನ: ಮಧು ಬಂಗಾರಪ್ಪ

ಇನ್ನು, ನಿನ್ನೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಆನ್ ಮತ್ತು ಆಫ್ ನೀರು ಬಿಡುವ ಕುರಿತು ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, "ನಾನು ಕಾಡಾ ಅಧ್ಯಕ್ಷನಾಗುವ ಮೊದಲೇ 100 ದಿನ ನೀರು ಬಿಡಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಎಡ ನಾಲೆಯ ನೀರು ನಿಲುಗಡೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಲದಂಡೆ ಭಾಗಕ್ಕೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಆ ಭಾಗದ ರೈತರಿಗೆ ಭತ್ತ ಬೆಳೆಯಬಾರದು ಎಂದು ಹೇಳಿದರೂ ಅವರು ಭತ್ತದ ನಾಟಿ ಮಾಡಿದ್ದಾರೆ. ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್​ ಅವರಿಗೆ ಮಾಹಿತಿ ನೀಡಲಾಗುತ್ತದೆ. ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ಹಾಗೂ ಬೇಸಿಗೆಯಲ್ಲಿ ಬೆಳೆಗೆ ತುಂಬ ಸಮಸ್ಯೆ ಉಂಟಾಗುತ್ತದೆ. ಸೆಪ್ಟೆಂಬರ್ 10 ಅಥವಾ 11ರಲ್ಲಿ ನೀರು ನಿಲುಗಡೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ನಾನು ನೀರಾವರಿ ಸಚಿವರಿಗೆ ತಿಳಿಸುತ್ತೇನೆ" ಎಂದು ಹೇಳಿದರು.

ABOUT THE AUTHOR

...view details